ದೇಶ

ವೈಯುಕ್ತಿಕ ದ್ವೇಷದಿಂದ ಕೊಲೆ, ಪಕ್ಷದ ಕೈವಾಡವಿಲ್ಲ: ಟಿಎಂಸಿ ಕಾರ್ಯಕರ್ತನ ಕೊಲೆ ಕುರಿತು ಬಿಜೆಪಿ ಸ್ಪಷ್ಟನೆ

Srinivasamurthy VN
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿನ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಕೊಲೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಕೇವಲ ವೈಯುಕ್ತಿಕ ದ್ವೇಷದಿಂದ ನಡೆದಿದ್ದು, ಟಿಎಂಸಿ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದು ಬಿಜೆಪಿ ಹೇಳಿದೆ.
ಕೂಚ್ ಬೆಹರ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತ ರೆಹಮಾನ್ ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕರ ಆರೋಪಗಳ ವಿರುದ್ಧ ಕಿಡಿಕಾರಿರುವ ಕೂಚ್ ಬೆಹರ್ ನ ಬಿಜೆಪಿ ಮುಖಂಡ ನಿಸಿತ್ ಪ್ರಮಾಣಿಕ್ ಅವರು, ಈ ಕೊಲೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ವೈಯುಕ್ತಿಕ ದ್ವೇಷದಿಂದ ಈ ಕೊಲೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮೃತನ ಕುಟುಂಬಸ್ಥರೇ ಸ್ಪಷ್ಟಪಡಿಸಿದ್ದು, ವೈಯುಕ್ತಿಕ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹೀಗಿದ್ದೂ ಟಿಎಂಸಿ ಈ ಪ್ರಕರಣದಲ್ಲಿ ಬಿಜೆಪಿಯನ್ನು ಎಳೆದು ತರುವ ಮೂಲಕ ಪ್ರಕರಣಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಹೇಳಿದ್ದಾರೆ.
ಅಂತೆಯೇ ಪ್ರಕರಣದಲ್ಲಿ ಬಿಜೆಪಿಯ ಯಾವುದೇ ರೀತಿಯ ಕೈವಾಡವಿಲ್ಲ. ಅಂತೆಯೇ ಕೊಲೆಯಲ್ಲಿ ಬಿಜೆಪಿಯ ಯಾವುದೇ ಕಾರ್ಯಕರ್ತ ಕೂಡ ಭಾಗಿಯಾಗಿಲ್ಲ ಎಂದು ನಿಸಿತ್ ಪ್ರಮಾಣಿಕ್ ಹೇಳಿದ್ದಾರೆ.
ಈಗ್ಗೆ 2 ದಿನಗಳ ಹಿಂದಷ್ಟೇ ಕೋಲ್ಕತಾದ ಡುಂಡುಂ ನಲ್ಲಿ ಟಿಎಂಸಿ ಮುಖಂಡ ನಿರ್ಮಲ್ ಕುಂಡುರನ್ನು ಭೀಕರವಾಗಿ ಕೊಲೆ ಗೈಯ್ಯಲಾಗಿತ್ತು. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕುಂಡು ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಹಸಿರಾಗಿರುವಾಗಲೇ ಮತ್ತೊಂದು ಘಟನೆ ನಡೆದಿದೆ.
SCROLL FOR NEXT