ದೇಶ

ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಕಗ್ಗೊಲೆ, ಒಂದೇ ವಾರದಲ್ಲಿ 2 ಕೊಲೆ ಪ್ರಕರಣ

Srinivasamurthy VN
ಕೋಲ್ಕತಾ: ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ರಕ್ತ ಚರಿತ್ರೆ ಭಾಗ-2 ಆರಂಭವಾಗಿದ್ದು, ಕೇವಲ ಒಂದು ವಾರದ ಅಂತರದಲ್ಲಿ ಎರಡು ಕೊಲೆ ಪ್ರಕರಣಗಳು ದಾಖಲಾಗಿವೆ.
ಕಳೆದ ಎರಡು ದಿನಗಳ ಹಿಂದಷ್ಟೇ ಟಿಎಂಸಿ ಮುಖಂಡ ನಿರ್ಮಲ್ ಕುಂಡು ಅವರನ್ನು ಕೋಲ್ಕತಾದ ಡುಂಡುಂ ಪ್ರದೇಶದಲ್ಲಿ ಗುಂಡು ಹಾರಿಸಿ ಕೊಲೆಗೈಯ್ಯಲಾಗಿತ್ತು. ಈ ಪ್ರಕರಣ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕೂಚ್ ಬೆಹರ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತನೋರ್ವನನ್ನು ಕೊಲೆಗೈಯ್ಯಲಾಗಿದೆ. ಕೇವಲ ಒಂದು ವಾರದ ಅವಧಿಯಲ್ಲಿ ಇದು 2ನೇ ಪ್ರಕರಣವಾಗಿದ್ದು, ಬಂಗಾಳ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೃತ ವ್ಯಕ್ತಿಯನ್ನು ಅಜಿಜರ್ ರೆಹಮಾ್ನ್ ಎಂದು ಗುರುತಿಸಲಾಗಿದ್ದು, ಈತ ಟಿಎಂಸಿ ಕಾರ್ಯಕರ್ತ ಎನ್ನಲಾಗಿದೆ. ದುಷ್ಕರ್ಮಿಗಳು ಈತನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಭವಿಸಿದ್ದ ಗಲಾಟೆಗಳಲ್ಲಿ ಈತನೂ ಭಾಗಿಯಾಗಿದ್ದ ಎಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ.
ಕೊಲೆಯಲ್ಲಿ ಬಿಜೆಪಿ ಕೈವಾಡ
ಇನ್ನು ರೆಹಮಾನ್ ಕೊಲೆಯಲ್ಲಿ ಬಿಜೆಪಿ ಕೈವಾಡವಿದ್ದು, ರಾಜಕೀಯ ದ್ವೇಷಕ್ಕಾಗಿ ಆತನನ್ನು ಕೊಲೆಗೈಯ್ಯಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಬಿಜೆಪಿ ಮುಖಂಡ ಅಜರ್ ಅಲಿ ಮತ್ತು ಆತನ ಗ್ಯಾಂಗ್ ರೆಹಮಾನ್ ನನ್ನು ಕೊಲೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT