ದೇಶ

ಸೇನಾ ಗ್ಲೌಸ್ ವಿವಾದ: ಧೋನಿ ಬೆಂಬಲಕ್ಕೆ ನಿಂತ ಕಾಂಗ್ರೆಸ್

Lingaraj Badiger
ನವದೆಹಲಿ: 2019ರ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಯೋಧರ ಬಲಿದಾನದ ಲಾಂಛನವನ್ನು ಹೊಂದಿರುವ ಗ್ಲೌಸ್ ಧರಿಸುವ ಮೂಲಕ ವಿವಾದಕ್ಕಿಡಾಗಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಅವರು ಒಂದು ವಿಶೇಷ ಪಡೆಯಲ್ಲಿ ನಿಯೋಜನೆಗೊಂಡಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ, ಕ್ರಿಕೆಟ್ ಆಟಗಾರರು ತಾವು ಧರಿಸುವ ಬಟ್ಟೆ ಅಥವಾ ಗ್ಲೌಸ್ ಮೇಲೆ ರಾಜಕೀಯ, ಧಾರ್ಮಿಕ ಮತ್ತು ಜನಾಂಗೀಯ ಹೇಳಿಕೆಗಳು ಇರಬಾರದು. ಆದರೆ ಧೋನಿ ಗ್ಲೌಸ್ ಮೇಲೆ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಹೇಳಿಕೆಗಳಿಲ್ಲ. ಹೀಗಾಗಿ ಗ್ಲೌಸ್ ಮೇಲಿನ ಸೇನಾ ಲಾಂಛನ ತೆಗೆಯುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ನಾಯಕ ಅಭಿಶೇಕ್ ಮನು ಸಿಂಘ್ವಿ ಅವರು ಟ್ವೀಟ್ ಮಾಡಿದ್ದಾರೆ.
ನಿನ್ನೆಯಷ್ಟೆ ತಮ್ಮ ಗ್ಲೌಸ್‌ನಿಂದ ಸೇನಾ ಲಾಂಛನವನ್ನು ತೆಗೆಯುವಂತೆ ಧೋನಿಗೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮನವಿ ಮಾಡಿದೆ. ಆದರೆ ಧೋನಿ ಬೆನ್ನಿಗೆ ನಿಂತ ಬಿಸಿಸಿಐ, ಧೋನಿ ಧರಿಸಿರುವ ಸೇನಾ ಲಾಂಛನವು ಧಾರ್ಮಿಕ ಅಥವಾ ವಾಣಿಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಹೇಳಿದೆ. ಅಲ್ಲದೆ ಅದನ್ನು ಧರಿಸಲು ಧೋನಿಗೆ ಅವಕಾಶ ನೀಡಬೇಕು ಎಂದು ಐಸಿಸಿಗೆ ಮನವಿ ಮಾಡುವುದಾಗಿ ಆಡಳಿತಗಾರರ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.
SCROLL FOR NEXT