ದೇಶ

ಭಾರತ-ಭೂತಾನ್ ದ್ವಿ ಪಕ್ಷೀಯ ಸಂಬಂಧ ಮತ್ತಷ್ಟು ಬಲವರ್ಧನೆ: ವಿದೇಶಾಂಗ ಸಚಿವ ಜೈಶಂಕರ್

Srinivasamurthy VN
ನವದೆಹಲಿ: ಭಾರತ ಮತ್ತು ಹಿಮಾಲಯನ್ ರಾಷ್ಟ್ರ ಭೂತಾನ್ ನಡುವೆ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಎಸ್ ಜೈಶಂಕರ್ ಅವರು, 2 ದಿನಗಳ ಭೂತಾನ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಜೈಶಂಕರ್ ಅವರು, 'ಧನ್ಯವಾದಗಳು, ನಿಮ್ಮ ಗೌರವಕ್ಕೆ, ಭೂತಾನ್‌ಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ ಮತ್ತು ನಮ್ಮ ಅನನ್ಯ ದ್ವಿಪಕ್ಷೀಯ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮುಂದುವರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಇಲಾಖೆ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, 'ಭಾರತದ ಆಪ್ತ ಸ್ನೇಹಿತ ಹಾಗೂ ನೆರೆಯ ರಾಷ್ಟ್ರ ಭೂತಾನ್ ನೊಂದಿಗೆ ಭಾರತ ತನ್ನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲು ನೀಡಿದ ಮಹತ್ವವನ್ನು ಇದು ಬಿಂಬಿಸುತ್ತದೆ ಎಂದು ತಿಳಿಸಿದೆ. 
ಇನ್ನು ಭೂತಾನ್ ಭೇಟಿಯ ಸಂದರ್ಭದಲ್ಲಿ ವಿದೇಶಾಂಗ ಸಚಿವರು ಭೂತಾನ್ ರಾಜ, ಜಿಗ್ಮೆ ಕೇಶರ್ ನಾಮ್ಜಿಲ್ ವಾಂಗ್ ಚುಕ್ ಅವರನ್ನು ಭೇಟಿಯಾಗಲಿದ್ದಾರೆ. ಮಾತ್ರವಲ್ಲ ಭೂತಾನ್ ಪ್ರಧಾನಿ ಲಿಯೋನ್ಚೆನ್ ಡಾ ಲೊಟೇ ಟ್ಹೆರಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಮಾಜಿ ವಿದೇಶಾಂಗ ಕಾರ್ಯದರ್ಶಿಯೂ ಆಗಿರುವ ಡಾ ಜೈಶಂಕರ್ ಅವರು ಭೂತಾನ್‌ನ ತಮ್ಮ ಸಹೋದ್ಯೋಗಿ ಲಯೋನ್ಪೋ ಡಾ ತಂಡಿ ದೋರ್ಜಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಭೂತಾನ್ ವಿಶಿಷ್ಟ ಮತ್ತು ಸಮಯೋಚಿತ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಇದು ಅತ್ಯಂತ ವಿಶ್ವಾಸಾರ್ಹ, ಪರಸ್ಪರ ಅರ್ಥ ಮಾಡಿಕೊಳ್ಳುವಿಕೆಯಿಂದ ಮತ್ತಷ್ಟುಗಟ್ಟಿಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
SCROLL FOR NEXT