ದೇಶ

ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಭಾರತದ ಸಿದ್ಧತೆ, ಮುಂದಿನ ತಿಂಗಳಲ್ಲೇ ಮುಹೂರ್ತ

Srinivasamurthy VN
ನವದೆಹಲಿ: ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ವೇ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಮೈಲುಗಲ್ಲಿಗೆ ಸಜ್ಜಾಗಿದ್ದು, ಉಪಗ್ರಹಗಳ ಧ್ವಂಸದ ಶತ್ರುಗಳ ದುಸ್ಸಾಹಸಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಭಾರತದ ಸಿದ್ಧತೆ ನಡೆಸಿದೆ.
ಹೌದು.. ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಕೂಡ ಸೇನಾ ನೆಲೆಯಾಗಿ ಮಾರ್ಪಡುತ್ತಿದ್ದು, ಇದೇ ಕಾರಣಕ್ಕೆ ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಭಾರತ ಕೂಡ ಬಾಹ್ಯಾಕಾಶ ಯುದ್ಧಕ್ಕೆ ಸಜ್ಜಾಗುತ್ತಿದೆ. ಇದೇ ಕಾರಣಕ್ಕೆ ಭಾರತ ಶೀಘ್ರ ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಮುಂದಾಗಿದ್ದು, ಇದೇ ಜುಲೈನಲ್ಲಿ ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಮುಹೂರ್ತಿ ನಿಗದಿ ಮಾಡಿದ್ದಾರೆ. ಮೂಲಗಳ ಪ್ರಕಾರ ಜುಲೈ ಕೊನೆಯ ವಾರದಲ್ಲಿ ಭಾರತ ಈ ಮಹತ್ವದ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಗೆ ಇಂಡ್​ಸ್ಪೇಸ್​ಎಕ್ಸ್​ (IndSpaceEx) ಎಂದು ನಾಮಕರಣ ಮಾಡಲಾಗಿದ್ದು, ಇದು ಬಾಹ್ಯಾಕಾಶದ ಬದಲು ಕಿರು ಮಾದರಿ ನಿರ್ಮಿಸಿ ಬಾಹ್ಯಾಕಾಶ ಯುದ್ಧದ ತಾಲೀಮು ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ತಾಲೀಮಿನಲ್ಲಿ ಸೇನಾಪಡೆಯ ಮೂರೂ ಪಡೆಗಳು ಮತ್ತು ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಇದು ಕಲ್ಪಿತ ಬಾಹ್ಯಾಕಾಶ ಯುದ್ಧದ ತಾಲೀಮೆ ಆಗಿದ್ದರೂ, ಬಾಹ್ಯಾಕಾಶದಲ್ಲಿರುವ ಭಾರತದ ಉಪಗ್ರಹಗಳಿಗೆ ಚೀನಾದಂಥ ಶತ್ರು ರಾಷ್ಟ್ರಗಳಿಂದ ಎದುರಾಗಬಹುದಾದ ಅಪಾಯದ ಹಿನ್ನೆಲೆಯಲ್ಲಿ ಭಾರತದ ಈ ತಾಲೀಮು ಭಾರಿ ಮಹತ್ವ ಪಡೆದುಕೊಂಡಿದೆ.
ಬಾಹ್ಯಾಕಾಶದಲ್ಲಿರುವ ನಮ್ಮ ಉಪಗ್ರಹಗಳ ಮೇಲೆ ನಿಯಂತ್ರಣ ಸಾಧಿಸಿ, ಅವುಗಳ ಕಾರ್ಯದ ಮೇಲೆ ಪರಿಣಾಮ ಬೀರುವ ಶತೃರಾಷ್ಟ್ರಗಳ ಕುತಂತ್ರವನ್ನು ವಿಫಲಗೊಳಿಸುವುದಕ್ಕಾಗಿಯೇ ಭಾರತ ಈ ತಾಲೀಮು ನಡೆಸಿದೆ. ಬಾಹ್ಯಾಕಾಶದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ಭಾರತ ಹೊಂದಬೇಕಿರುವ ಶಕ್ತಿಸಾಮರ್ಥ್ಯಗಳು ಉಪಕರಣಗಳ ಕುರಿತು ಅರಿತುಕೊಳ್ಳಲು ಇದು ಸಹಕಾರಿಯಾಗಲಿದೆ. ಹೀಗಾಗಿ ಭಾರತ ನಡೆಸುತ್ತಿರುವ ಇಂಡ್ ಸ್ಪೇಸ್​ ಎಕ್ಸ್​ ಪರೀಕ್ಷೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT