ದೇಶ

ಪತ್ರಕರ್ತನ ಬಂಧನ; ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಭಾರತೀಯ ಸಂಪಾದಕರ ಒಕ್ಕೂಟದ ಖಂಡನೆ

Srinivasamurthy VN
ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕುರಿತು ಆಕ್ಷೇಪಾರ್ಹ ಟೀಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತನ ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರದ ನಿಲುವನ್ನು ಭಾರತೀಯ ಸಂಪಾದಕರ ಒಕ್ಕೂಟ (Editors Guild of India) ಖಂಡಿಸಿದೆ.
ಈ ಬಗ್ಗೆ ಭಾರತೀಯ ಸಂಪಾದಕರ ಒಕ್ಕೂಟ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪತ್ರಕರ್ತನ ಬಂಧನ ಕಾನೂನು ವಿರೋಧ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸುವ ಪ್ರಯತ್ನ ಮತ್ತು ಅಧಿಕಾರಿಗಳಿಂದ ಕಾನೂನಿನ ದುರುಪಯೋಗ ಟೀಕಿಸಿದೆ. 
ತಮ್ಮನ್ನು ಟೀಕಿಸಿದ ಎಂಬ ಒಂದೇ ಕಾರಣಕ್ಕೆ ಪತ್ರಕರ್ತನನ್ನು ಬಂಧಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯಾನಾಥ್, ಮಾಧ್ಯಮವನ್ನು ಹೆದರಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಗ್ರಹಿಸಲು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕುರಿತು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹಬ್ಬಿಸಿದ ಸಂಬಂಧ ಉತ್ತರ ಪ್ರದೇಶ ಪೊಲೀಸರು ಪ್ರಶಾಂತ್ ಕನೋಜಿಯಾ ಎಂಬ ಪತ್ರಕರ್ತನನ್ನು ಶನಿವಾರ ಸಂಜೆ ಬಂಧಿಸಿತ್ತು. ಪ್ರಶಾಂತ್‌ ಕನೋಜಿ ಪತ್ರಕರ್ತ ಹಾಗೂ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ಎಂದು ವರದಿಯಾಗಿದೆ. ಈ ಸಂಬಂಧ ಇಲ್ಲಿನ ಹಜರತ್‌ಗಂಜ್‌ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಖಲೆಗಳ ಪರಿಶೀಲನೆ ಮತ್ತು ಆ ವ್ಯಕ್ತಿಯ ಸಮಗ್ರ ವಿಚಾರಣೆ ಬಳಿಕ ಆತ ಅಪರಾಧ ಎಸಗಿರುಗುವುದು ತಿಳಿದುಬಂದಿದ್ದರಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನ ವಿರುದ್ಧ ಐಪಿಸಿ 500(ಮಾನನಷ್ಟ), ಮಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾದೆ.  ಬಂಧಿತ ಆರೋಪಿ ಪ್ರಶಾಂತ್‌ ಕನೋಜಿ ದೆಹಲಿಯಲ್ಲಿ ನೆಲೆಸಿದ್ದಾರೆ. ಆದಿತ್ಯನಾಥ್‌ ಅವರ ಕುರಿತಾಗಿ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊವನ್ನು ಆಕ್ಷೇಪಾರ್ಹ ಟೀಕೆಗಳೊಂದಿಗೆ ಟ್ವೀಟ್‌ ಮಾಡಿದ್ದರು ಎಂದು ಎಎನ್‌ಐ ವರದಿಮಾಡಿದೆ.
SCROLL FOR NEXT