ದೇಶ

ಪ್ರಧಾನಿ ಮೋದಿ, ಇತರರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ವಿವರ ನೀಡಲು ಚುನಾವಣಾ ಆಯೋಗ ನಕಾರ

Lingaraj Badiger
ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ರಾಜಕಾರಣಿಗಳು ನೀತಿ ಸಂಹಿತಿ ಉಲ್ಲಂಘಿಸಿದ ಬಗ್ಗೆ ಮಾಹಿತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ.
ಮೋದಿ ಹಾಗೂ ಇತರರು ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ್ದ ಆರ್ ಟಿಐ ಅರ್ಜಿಯನ್ನು ಆಯೋಗ ವಜಾಗೊಳಿಸಿದ್ದು, ಈ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆ ಇರುವುದರಿಂದ ನೀಡುವುದಿಲ್ಲ ಎಂದು ಉತ್ತರಿಸಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಕಚೇರಿಗಳಲ್ಲಿ ವ್ಯವಹರಿಸಬೇಕು ಎಂದು ತಿಳಿಸಿದೆ. ಅಲ್ಲದೆ ನೀವು ಬಯಸುತ್ತಿರುವ ಮಾಹಿತಿಯು ಸಂಕಲಿತ ರೂಪದಲ್ಲಿ ಲಭ್ಯವಿಲ್ಲ ಮತ್ತು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಅರ್ಜಿದಾರರಿಗೆ ತಿಳಿಸಿದೆ.
ಇನ್ನು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಲು ಚುನಾವಣಾ ಆಯೋಗದ ಓರ್ವ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಬಗ್ಗೆಯೂ ಯಾವುದೇ ಮಾಹಿತಿ ನೀಡಲು ಆಯೋಗ ನಿರಾಕರಿಸಿದೆ.
ಬಾಲಾಕೋಟ್ ವಾಯುದಾಳಿ, ಅಲ್ಪಸಂಖ್ಯಾತ ಮತಕ್ಷೇತ್ರಕ್ಕೆ ರಾಹುಲ್ ಗಾಂಧಿ ಸ್ಪರ್ಧೆ ಹಾಗೂ ಪಾಕಿಸ್ತಾನದ ಮೇಲೆ ಅಣ್ವಸ್ತ್ರ ಬಳಕೆ ಕುರಿತ ಪ್ರಧಾನಿ ಹೇಳಿಕೆಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿತ್ತು.
SCROLL FOR NEXT