ದೇಶ

ರಾಜಸ್ಥಾನ: ಲೋಕಸಭಾ ಚುನಾವಣೆ ಹೀನಾಯ ಸೋಲಿನ ನಂತರ ಸಚಿನ್ ಪೈಲಟ್ 'ಗ್ರಾಮ ವಾಸ್ತವ್ಯ'

Nagaraja AB
ಜೈಪುರ: ಲೋಕಸಭಾ ಚುನಾವಣೆ ಹೀನಾಯ ಸೋಲಿನ ಬಳಿಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೆಹಲಿಯಲ್ಲಿದ್ದರೆ  ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಜಾಲೊರ್ - ಶಿರೊಹಿ ಮತ್ತು ಪಾಲಿ ಜಿಲ್ಲೆಗಳ ಹಳ್ಳಿಗಳಲ್ಲಿ ಸುತ್ತಾಡುತ್ತಾ  ಜನರಿಗೆ ಹತ್ತಿರವಾಗಲು ಮುಂದಾಗಿದ್ದಾರೆ. 
ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ಜನರೊಂದಿಗೆ ಇದ್ದು ಅವರ ಕಷ್ಟ ಸುಖಗಳನ್ನು ಆಲಿಸುತ್ತಿದ್ದಾರೆ.ಪ್ರವಾಸದ ಸಂದರ್ಭದಲ್ಲಿ ಸರ್ಕಾರದ ಅತಿಥಿ ಗೃಹ ಅಥವಾ ಹೋಟೆಲ್ ಗಳಿಂದ ದೂರ ಉಳಿದಿದ್ದು, ಹಳ್ಳಿಯಲ್ಲಿಯೇ ರಾತ್ರಿಯಿಡೀ ಮಲಗುತ್ತಿದ್ದಾರೆ. ಹಳ್ಳಿಯ ಜನರೇ ತಯಾರಿಸಿದ ಆಹಾರ ಸೇವಿಸುತ್ತಿದ್ದಾರೆ 
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿ ಬಿಜೆಪಿ ಎಲ್ಲಾ 25 ಸ್ಥಾನಗಳಲ್ಲಿ ಜಯಬೇರಿ ಬಾರಿಸಿದ  ಹಿನ್ನೆಲೆಯಲ್ಲಿ ಮತ್ತೆ ಪಕ್ಷ ಕಟ್ಟುವ ನಿಟ್ಟಿನಲ್ಲಿ ಮುಂದಾಗಿರುವ ಸಚಿನ್ ಪೈಲಟ್ ಕಾರ್ಯವೈಖರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಕಾಂಗ್ರೆಸ್ ವಿಫಲತೆ ಬಗ್ಗೆ ಸಚಿನ್ ಪೈಲಟ್ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಜನರ ಆಲೋಚನೆಗಳ ಬಗ್ಗೆ ಮುಖಂಡರಿಂದ ಸಲಹೆ ಪಡೆಯುತ್ತಿದ್ದಾರೆ.
ಜಾಲೊರ್ ನ ಕಾಚೇಲಾ ಹಳ್ಳಿಯ ರೈತರೊಬ್ಬರ ಮನೆಯಲ್ಲಿ ಭಾನುವಾರ ಊಟ ಮಾಡಿ ಅಲ್ಲಿಯೇ ತಂಗಿದ್ದ ಸಚಿನ್ ಪೈಲಟ್, ಬೇವಿನ ಸಸಿಯಿಂದ ಹಲ್ಲು ಉಜ್ಜಿದ್ದಾರೆ. ಅವರೇ ಶೇವ್ ಮಾಡಿಕೊಂಡಿದ್ದಾರೆ. ಕೆರ್ ಸಾಂಗ್ರಿ ವೆಜಿಟೇಬಲ್, ಮಜ್ಜಿಗೆ , ರಬ್ರಿ ಹಾಗೂ ಬಾಜ್ರ ರೊಟ್ಟಿಯನ್ನು ಉಪಹಾರವಾಗಿ ಸೇವಿಸಿದ್ದಾರೆ ಅವರೊಂದಿಗೆ ಅಧಿಕಾರಿಗಳು ಕೂಡಾ ರೈತನ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಸಚಿನ್ ಪೈಲಟ್ ಇದೇ ರೀತಿಯ ಅನುಭವ ಪಡೆದುಕೊಂಡಿದ್ದರು 
ಸೋಲುವುದು, ಗೆಲ್ಲುವುದು ರಾಜಕೀಯ ಜೀವನದಲ್ಲಿ ಸಹಜ ಆದರೆ,  ಸಾರ್ವಜನಿಕರಿಗಾಗಿ ಕಾರ್ಯಕ್ರಮ ರೂಪಿಸುವುದಾಗಿ ಕಾಂಗ್ರೆಸ್ ಮುಖಂಡನಾಗಿ ಭರವಸೆ ನೀಡುವುದಾಗಿ ಸಚಿನ್ ಪೈಲಟ್ ಹೇಳಿದ್ದಾರೆ. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಜಾಲೊರ್ ನ ಬಿನ್ ಮಾಲ್ ನಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಪರಿಶೀಲನೆ ನಡೆಸಿದ ಸಚಿನ್ ಪೈಲಟ್, ಅನೇಕ ಯೋಜನೆಗಳ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರು. ಗುರಿಯನ್ನು ತಲುಪಲು ಯಾವ ರೀತಿಯ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
SCROLL FOR NEXT