ದೇಶ

ಯಾವ ಆಧಾರದ ಮೇಲೆ ಪತ್ರಕರ್ತನನ್ನು ಬಂಧಿಸಿದ್ದೀರಿ? ಕೂಡಲೇ ಬಿಡುಗಡೆ ಮಾಡಿ: ಯೋಗಿ ಸರ್ಕಾರಕ್ಕೆ 'ಸುಪ್ರೀಂ' ತಪರಾಕಿ!

Srinivasamurthy VN
ನವದೆಹಲಿ: ಪತ್ರಕರ್ತನನ್ನು ಬಂಧಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ  ಪತ್ರಕರ್ತನನ್ನು ಬಿಡುಗಡೆ ಮಾಡುವಂತೆ ಹೇಳಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಪ್ರಶಾಂತ್ ಕನೋಜಿಯಾನನ್ನು ಪೊಲೀಸರು ಬಂಧಿಸಿದ್ದರು. ಪತ್ರಕರ್ತನ ಬಂಧನಕ್ಕೆ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ದೆಹಲಿಯಲ್ಲಿ ಸಂಪಾದಕರ ಒಕ್ಕೂಟ ಕೂಡ ಘಟನೆಯನ್ನು ಖಂಡಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ಕೂಡ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಬಾರದು. ಸಂವಿಧಾನ ನಾಗರೀಕರ ಹಕ್ಕಿಗೆ ಪ್ರಮುಖ್ಯತೆ ನೀಡುತ್ತದೆ. ಯಾವುದೇ ಕಾರಣಕ್ಕೂ ಅದನ್ನು ಉಲ್ಲಂಘಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದ್ದರು ಎಂದು ಬಂಧಿಸುವುದು ಎಷ್ಟು  ಸೂಕ್ತ, ಯಾವ ಆಧಾರದಲ್ಲಿ  ಬಂಧಿಸಲಾಗಿದೆ ಎಂದು  ನ್ಯಾಯಾಲಯ  ಯುಪಿ ಸರ್ಕಾರವನ್ನು ಪ್ರಶ್ನಿಸಿದೆ. ಸಾಮಾನ್ಯವಾಗಿ  ನ್ಯಾಯಾಲಯ  ಈ ರೀತಿಯ ಅರ್ಜಿಗಳನ್ನು  ವಿಚಾರಣೆಗೆ ಕೈಗೆತ್ತಿಕೊಳ್ಳುವುದಿಲ್ಲ, ಆದರೆ ಒಬ್ಬ ವ್ಯಕ್ತಿಯನ್ನು   ಇಷ್ಟೊಂದು ದಿನಗಳ ಕಾಲ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ  ನ್ಯಾಯಾಲಯ  ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 
ಒಬ್ಬೊಬ್ಬರ ಅಭಿಪ್ರಾಯಗಳು ಭಾವನೆಗಳು ಒಂದೊಂದು ತೆರನಾಗಿರುತ್ತದೆ. ಆದರೆ ಆತ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದಿತ್ತು. ಆದರೆ ಆತನನ್ನು ನೀವು ಯಾವ ಆಧಾರದ ಮೇಲೆ ಬಂಧಿಸಿದ್ದೀರಿ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಅಜಯ್ ರಸ್ತೋಗಿ ನೇತೃತ್ವದ ರಜಾ ಕಾಲದ ನ್ಯಾಯಪೀಠ ಕೇಳಿದೆ.
ನಿನ್ನೆ ಕನೋಜಿಯಾ ಅವರ ಪತ್ನಿ ಜಗೀಶಾ ಆರೋರ ಕೋರ್ಟ್ ಗೆ ಕನೋಜಿಯಾ ಬಂಧನವನ್ನು ಪ್ರಶ್ನಿಸಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಬಂಧನವನ್ನು ಅಕ್ರಮ ಮತ್ತು ಅಸಂವಿಧಾನಿಕ ಎಂದು ಹೇಳಿದ್ದರು.
SCROLL FOR NEXT