ದೇಶ

ಜುಲೈ 15ರಂದು ಚಂದ್ರಯಾನ-2 ಉಡಾವಣೆ: ಇಸ್ರೋ

Lingaraj Badiger
ಬೆಂಗಳೂರು: ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯನ್ನು ಜುಲೈ 15ರಂದು ಬೆಳಗಿನ ಜಾವ 2:51ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಡಾ. ಕೆ ಶಿವನ್ ಅವರು ಬುಧವಾರ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವನ್ ಅವರು, ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ಚಂದ್ರಯಾನ - 2ರ ಪರಿಕರಗಳನ್ನು ಹೊತ್ತೊಯ್ಯಲಿದೆ. ಸೆಪ್ಟೆಂಬರ್ 6 ಅಥವಾ 7 ರಂದು ಜಿಎಸ್ ಎಲ್ ವಿ ರಾಕೆಟ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ರೋವರ್(ವಿಕ್ರಂ), ಲ್ಯಾಂಡರ್ ಮತ್ತು ಆರ್ಬಿಟರ್ ಸಹಿತ 3.8 ಟನ್ ತೂಕದ ಮೂರು ಸಾಮಾಗ್ರಿಗಳನ್ನು ರಾಕೆಟ್ ಹೊತ್ತೊಯ್ಯಲಿದೆ ಎಂದು ಹೇಳಿದರು.
15 ನಿಮಿಷಗಳ ಈ ಉಡಾವಣೆಯಲ್ಲಿ ಲ್ಯಾಂಡರ್‌ ಅನ್ನು ಚಂದ್ರನ ನೆಲದ ಮೇಲೆ ಇಳಿಸಲಾಗುವುದು. ಇಸ್ರೋದ ಇತಿಹಾಸದಲ್ಲೇ ಇದೊಂದು ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆಯಾಗಿದೆ ಎಂದು ಶಿವನ್ ತಿಳಿಸಿದ್ದಾರೆ.
ಚಂದ್ರನ ಅಂಗಳವನ್ನು ತಲುಪಲು ಚಂದ್ರಯಾನ-1ರ ಉಡ್ಡಯನದ ವೇಳೆ ಅನುಸರಿಸಿದ ಕಾರ್ಯತಂತ್ರವನ್ನೇ ಈ ಬಾರಿಯೂ ಅನುಸರಿಸಲಾಗುವುದು. ಆದರೆ ಸುಗಮ ಇಳಿಯುವಿಕೆ (ಸಾಫ್ಟ್ ಲ್ಯಾಂಡಿಂಗ್) ಸವಾಲು ಮಾತ್ರ ಸಂಪೂರ್ಣ ಹೊಸದು ಎಂದು ಶಿವನ್ ವಿವರಿಸಿದರು. 
ದಿಕ್ಸೂಚಿಗಾಗಿ ವಿದೇಶಿ ಸೇವೆ ಬಳಕೆಯ ಶುಲ್ಕ ಸೇರಿದಂತೆ ಯೋಜನೆಯ ಒಟ್ಟು ವೆಚ್ಚ 603 ಕೋಟಿ ರೂ.ಗಳಾಗಿದ್ದು, ಉಡ್ಡಯನಕ್ಕೆ 375 ಕೋಟಿ ರೂ ವೆಚ್ಚವಾಗುತ್ತದೆ. ಚಂದ್ರಯಾನ-2 ನಿರ್ಮಾಣದಲ್ಲಿ ಇಸ್ರೋ ಉದ್ಯಮ ಮತ್ತು ಶೈಕ್ಷಣಿಕ ವಲಯದ ತಜ್ಞರನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದರು.
SCROLL FOR NEXT