ದೇಶ

ಉತ್ತರ ಪ್ರದೇಶ: ಬಾರ್ ಕೌನ್ಸಿಲ್ ಪ್ರಥಮ ಮಹಿಳಾ ಅಧ್ಯಕ್ಷೆಯನ್ನು ಗುಂಡು ಹಾರಿಸಿ ಕೊಂದ ಸಹೋದ್ಯೋಗಿ!

Raghavendra Adiga
ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶ ಬಾರ್ ಕೌನ್ಸಿಲ್ ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದ ದರ್ವೇಶ್ ಯಾದವ್ ತಮ್ಮ ಸಹೋದ್ಯೋಗಿಯ ಗುಂಡೇಟಿನಿಂದ ಸಾವಿಗೀಡಾಗಿದ್ದಾರೆ.
ಆಗ್ರಾ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಘಟನೆಯಲ್ಲಿ ಅಡ್ವೋಕೇಟ್ ಅರವಿಂದ್ ಕುಮಾರ್ ಮಿಶ್ರಾ ಅವರ ಕೋಣೆಯಲ್ಲಿ ಯಾದವ್  ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆದಿದೆ.
ಇನ್ನು ಮಿಶ್ರಾ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಆರೋಪಿ ಅಡ್ವೋಕೇಟ್ ಮನೀಶ್ ಶರ್ಮಾ ತಾವೂ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ. ಆರೋಪಿ ಶರ್ಮಾ ಸ್ಥಿತಿ ಈಗ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕೇವಲ ಎರಡು ದಿನಗಳ ಹಿಂದಷ್ತೇ ದರ್ವೇಶ್ ಯಾದವ್ ಬಾರ್ ಕೌನ್ಸಿಲ್ ಹುದ್ದೆಗೆ ಆಯ್ಕೆಯಾಗಿದ್ದರು. 
ಇನ್ನು ಆರೋಪಿ ಮನೀಶ್ ಶರ್ಮಾ ಹಾಗು ಯಾದವ್ ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದರೆಂದು ಹೇಳಿದ್ದು  ಇಬ್ಬರೂ ತಮ್ಮ ಛೇಂಬರ್ ಗಳಲ್ಲಿ ವಕೀಲರನ್ನು ಭೇಟಿಯಾಗಿ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದ್ದರು.

ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದಂತೆ ಅಡ್ವೋಕೇಟ್ ಅರವಿಂದ್ ಮಿಶ್ರಾ ಅವರ ಕೊಠಡಿಯಲ್ಲಿದ್ದಾಗ ಇಬ್ಬರ ನಡುವೆ ಬಿರುಸಾದ ವಾಗ್ವಾದ ನಡೆದಿದೆ. ಆ ವೇಳೆ ತಾಳ್ಮೆ ಕಳೆದುಕೊಂಡ ಮನೀಶ್ ಶರ್ಮಾ ಜೇಬಿನಿಂದ ಪಿಸ್ತೂಲ್ ತೆಗೆದು ಯಾದವ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಅವಧ್ ಬಾರ್ ಅಸೋಸಿಯೇಷನ್ ಈ ಘಟನೆಯನ್ನು ಖಂಡಿಸಿದ್ದು ನಾಳೆ ಪ್ರತಿಭಟನೆಯಾಗಿ ತಾವು ಕೆಲಸದಿಂದ ದೂರವಿರಲು ತೀರ್ಮಾನಿಸಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
SCROLL FOR NEXT