ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಜತೆ ಗಾಯತ್ರಿ ಪ್ರಜಾಪತಿ
ಲಖನೌ: 2012-2016ರ ನಡುವೆ ಅಕ್ರಮ ಮರಳುಗಾರಿಕೆ ನಡೆಸಿರುವ ಪ್ರಕರಣ ಕುರಿತಂತೆ ಉತ್ತರ ಪ್ರದೇಶದ ಮಾಜಿ ಮಂತ್ರಿ ಗಾಯತ್ರಿ ಪ್ರಜಾಪತಿ ಅವರ ನಿವಾಸ ಸೇರಿದಂತೆ 22 ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ಬುಧವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷ ಜನವರಿಯಲ್ಲಿ ಅಲಹಬಾದ್ ಹೈಕೋರ್ಟ್ ನೀಡಿದ ನಿರ್ದೇಶನದಂತೆ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ." ಉತ್ತರ ಪ್ರದೇಶ ಮಾಜಿ ಮಂತ್ರಿಗಳಾದ ಪ್ರಜಾಪತಿ ಅವರಿಗೆ ಸೇರಿದ್ದ ಅಮೇಥಿಯಲ್ಲಿನ ಮೂರು ವಸತಿ ಸಮುಚ್ಚಯ ಸೇರಿದಂತೆ ಉತ್ತರ ಪ್ರದೇಶದ 22 ಪ್ರದೇಶಗಳಲ್ಲಿ ಈ ಬೆಳಿಗ್ಗೆ ಸಿಬಿಐ ತಂಡಗಳು ತನಿಖೆ ಆರಂಭಿಸಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪತಿ ಅವರು ಪ್ರಸ್ತುತ ಅತ್ಯಾಚಾರ ಪ್ರಕರಣವೊಂದರಲ್ಲಿ ಲಕ್ನೋ ಜೈಲಿನಲ್ಲಿದ್ದಾರೆ. ಪ್ರಜಾಪತಿ ಅಲ್ಲದೆ ಹಮೀರ್‌ಪುರದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಚಂದ್ರ ಮಿಶ್ರಾ ಅವರ ಮನೆ ಮೇಲೂ ದಾಳಿ ನಡೆದಿದೆ.
ಲಕ್ನೋದ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಪ್ರಜಾಪತಿ ಅವರ 'ಆವಾಸ್ ವಿಕಾಸ್ ನಿವಾಸ'ಕ್ಕೆ ದಾಳಿ ನಡೆಸಿದರು. ಮನೆಯ ನಿವಾಸಿಗಳ ಹೇಳಿಕೆಗಳನ್ನು ಕೂಡ ಅವರು ದಾಖಲಿಸಿಕೊಂಡರು ವರದಿ ತಿಳಿಸಿದೆ.
ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿ ಸಿಬಿಐ, ಉತ್ತರ ಪ್ರದೇಶದಲ್ಲಿ ಸುಮಾರು 22 ಸ್ಥಳಗಳ ಮೇಲೆ ಇದುವರೆಗೆ ದಾಳಿ ನಡೆಸಿದೆ.
ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ, ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಕಲಂಗಳಡಿ ಜನವರಿ 2ರಂದು 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.
ಹಮೀರ್‌ಪುರದ ಮಾಜಿ ಜಿಲ್ಲಾಧಿಕಾರಿ ಬಿ ಚಂದ್ರಕಲಾ, ಸಮಾಜವಾದಿ ಪಕ್ಷದ ವಿಧಾನ ಪರಿಷತ್ ಸದಸ್ಯ ರಮೇಶ್ ಕುಮಾರ್ ಮಿಶ್ರಾ, ಅವರ ಸಹೋದರ ದಿನೇಶ್ ಕುಮಾರ್ ಮಿಶ್ರಾ ಅವರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಜನವರಿ 5ರಂದು ಸಿಬಿಐ ಅಧಿಕಾರಿಗಳು, ಎಸ್‌ಪಿ ಮತ್ತು ಬಿಎಸ್‌ಪಿ ಮುಖಂಡರಿಗೆ ಸೇರಿದ ದೆಹಲಿ ಮತ್ತು ಉತ್ತರ ಪ್ರದೇಶದ 14 ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos