ದೇಶ

ಪಾಕಿಸ್ತಾನಕ್ಕೆ ಸೆಡ್ಡು: ಎಸ್‌ಸಿಓ ಶೃಂಗಸಭೆಗೆ ಪಾಕ್ ವಾಯುಮಾರ್ಗ ಬಳಸದಿರಲು ಪ್ರಧಾನಿ ಮೋದಿ ನಿರ್ಧಾರ!

Vishwanath S
ಲಾಹೋರ್: ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ನಲ್ಲಿ ಜೂನ್ 13 ಮತ್ತು 14ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ವಾಯುಮಾರ್ಗ ಬದಲಿಗೆ ಒಮನ್ ಮೂಲಕ ತೆರಳಲಿದ್ದಾರೆ. 
ಇದಕ್ಕೂ ಮೊದಲು ಪ್ರಧಾನಿ ಮೋದಿ ವಿಮಾನ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲು ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಇದಕ್ಕೆ ಪಾಕಿಸ್ತಾನವೂ ಸಹ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ ಇದೀಗ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಪ್ರಧಾನಿ ಪಾಕ್ ವಾಯುಮಾರ್ಗದಲ್ಲಿ ತೆರಳುತ್ತಿಲ್ಲ. ಬದಲಿಗೆ ಒಮನ್, ಇರಾನ್ ಮತ್ತು ಸೆಂಟ್ರಲ್ ಏಷ್ಯಾ ದೇಶಗಳ ಮೂಲಕ ಬಿಶ್ಕೆಕ್ ಗೆ ತೆರಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕಳೆದ ಫೆಬ್ರವರಿ 26ರಂದು ಪಾಕಿಸ್ತಾನದ ಪ್ರಾಂತ್ಯದೊಳಗಿರುವ ಬಾಲಾಕೋಟ್ ನಲ್ಲಿ ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ತಾಣವನ್ನು ನಾಶಪಡಿಸಲು ಭಾರತೀಯ ವಾಯುಪಡೆ ವಿಮಾನ ಏಕಾಏಕಿ ವಾಯುದಾಳಿ ನಡೆಸಿತ್ತು. ಈ ಘಟನೆ ನಂತರ ಪಾಕಿಸ್ತಾನ ತನ್ನ ಒಟ್ಟು 11 ವಾಯುಮಾರ್ಗಗಳಲ್ಲಿ ದಕ್ಷಿಣ ಪಾಕಿಸ್ತಾನದ ಎರಡು ವಾಯುಮಾರ್ಗಗಳಲ್ಲಿ ಸಂಚಾರಕ್ಕೆ ಮಾತ್ರ ಭಾರತಕ್ಕೆ ಅನುಮತಿ ನೀಡಿತ್ತು. ಬೇರೆಲ್ಲಾ ಮಾರ್ಗಗಳು ಭಾರತದ ಪಾಲಿಗೆ ಮುಚ್ಚಿದ್ದವು.
ಇದೀಗ ಪ್ರಧಾನಿ ಮೋದಿಯವರಿಗೆ ಕಿರ್ಗಿಸ್ತಾನಕ್ಕೆ ಹೋಗಲು ಪಾಕಿಸ್ತಾನದ ವಾಯುಮಾರ್ಗದ ಮೂಲಕ ಹಾರಾಟ ನಡೆಸಲು ಭಾರತ ಮನವಿ ಮಾಡಿತ್ತು. ಅದಕ್ಕೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. 
ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾಗವಹಿಸಲಿದ್ದಾರೆ. ಇತ್ತೀಚೆಗೆ ಪಾಕ್ ಪ್ರಧಾನಿ ಭಾರತ ಪ್ರಧಾನಿಗೆ ಪತ್ರ ಬರೆದು ಭೌಗೋಳಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಹಾಗೂ ಎರಡೂ ದೇಶಗಳ ನಡುವಿನ ಜಮ್ಮು-ಕಾಶ್ಮೀರ ವಿವಾದಗಳನ್ನು ಬಗೆಹರಿಸಲು ಪರಿಹಾರದ ಅಗತ್ಯವಿದೆ ಎಂದು ಹೇಳಿದ್ದರು.
ಶಾಂತಿ ಮಾತುಕತೆಯ ತನ್ನ ಪ್ರಸ್ತಾಪಕ್ಕೆ ಭಾರತ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಬಹುದು ಎಂಬ ಆಶಾ ಭಾವನೆಯಲ್ಲಿ ಪಾಕಿಸ್ತಾನ ಇನ್ನೂ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಶಾಂಘೈ ಶೃಂಗಸಭೆಯ ವೇಳೆ ಭಾರತ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿಗಳ ನಡುವೆ ಯಾವುದೇ ಮಾತುಕತೆಗಳು ನಿಗದಿಯಾಗಿಲ್ಲ. 
ಕಳೆದ ಮೇ 21ರಂದು ಎಸ್ ಸಿಒ ವಿದೇಶಾಂಗ ಸಚಿವರುಗಳ ಸಭೆ ಬಿಶ್ಕೆಕ್ ನಲ್ಲಿದ್ದಾಗಲೂ ಕೂಡ ಸುಷ್ಮಾ ಸ್ವರಾಜ್ ಅವರ ಪ್ರಯಾಣಕ್ಕೆ ಪಾಕಿಸ್ತಾನ ವಿಶೇಷ ಒಪ್ಪಿಗೆ ನೀಡಿತ್ತು.
SCROLL FOR NEXT