ದೇಶ

ಉತ್ತಮ ಭದ್ರತೆ ನೀಡುವವರೆಗೂ ಪ್ರತಿಭಟನೆ ಮುಂದುವರಿಕೆ: ಬ್ಯಾನರ್ಜಿಗೆ ಕೊಲ್ಕತ್ತಾ ಕಿರಿಯ ವೈದ್ಯರ ಪ್ರತಿಕ್ರಿಯೆ

Nagaraja AB
ಕೊಲ್ಕತ್ತಾ: ಉತ್ತಮ ಭದ್ರತೆ ನೀಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾ ನಿರತ ಎನ್ ಆರ್ ಎಸ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ ಡಾಕ್ಟರ್ ಗಳ  ಜಂಟಿ ಕ್ರಿಯಾ ಸಮಿತಿ ಸದಸ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಕೇಸರಿ ತ್ರಿಪಾಠಿ ಅವರನ್ನು  ಭೇಟಿ ಮಾಡಿ, ರಾಜ್ಯದಲ್ಲಿನ ಪ್ರತಿಯೊಂದು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.
ಜೂನ್ 10 ರಂದು ಎನ್ ಆರ್ ಎಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸೂಕ್ತ ಭದ್ರತೆ ಒದಗಿಸಬೇಕೆಂದು ನಮ್ಮ ಬೇಡಿಕೆಯಾಗಿದೆ.ಬೇಡಿಕೆ ಈಡೇರಿದ ಕೂಡಲೇ ಕೆಲಸಕ್ಕೆ ಹಾಜರಾಗುವುದಾಗಿ ಸಭೆಯ ಬಳಿಕ ವೈದ್ಯರೊಬ್ಬರು ತಿಳಿಸಿದರು.
ತಮ್ಮ ಬೇಡಿಕೆ ಈಡೇರಿಕೆಗಾಗಿ  ಸಭೆ ಆಯೋಜಿಸುವಂತೆ  ಕಿರಿಯ ವೈದ್ಯರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. 48 ಗಂಟೆಯೊಳಗೆ ಎಲ್ಲ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗಳ ತುರ್ತು ನಿಘಾ ಘಟಕಗಳು ಹಾಗೂ ಒಳಭಾಗದಲ್ಲಿ ಸೂಕ್ತ ಭದ್ರತೆ ಕಲ್ಪಿಸುವಂತೆ ವೈದ್ಯರು ಪತ್ರದಲ್ಲಿ ಉಲ್ಲೇಖಿಸಿದ್ದರು. 
ವೈದ್ಯರ ಮೇಲೆ ಹಲ್ಲೆ ನಡೆದಾಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಇಲಾಖಾ ತನಿಖೆ ನಡೆಯಬೇಕೆಂದು  ಆಗ್ರಹಿಸಲಾಗಿತ್ತು. ಜೂನ್ 10 ರಂದು ನಿಲ್ ರತನ್ ಸರ್ಕಾರ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಮೃತಪಟ್ಟ ನಂತರ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದನ್ನು ಖಂಡಿಸಿ ಮಂಗಳವಾರದಿಂದ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
SCROLL FOR NEXT