ದೇಶ

ಮಂಡ್ಯ ಬಸ್ ದುರಂತ: ಕೇಂದ್ರದ ಪರಿಹಾರವನ್ನು ಪ್ರಚಾರಕ್ಕೆ ಬಳಸೋದು ತಪ್ಪು- ಸುಮಲತಾ ಅಂಬರೀಷ್

Nagaraja AB
ಮಂಡ್ಯ: ಮಂಡ್ಯದ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಕಳೆದ ವರ್ಷ ನಡೆದಿದ್ದ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಆದರೆ, ಇದು ಸುಮಲತಾ ಹಾಗೂ ಜೆಡಿಎಸ್ ಬೆಂಬಲಿಗರ ನಡುವಣ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. 
ಕೇಂದ್ರದಿಂದ ಹಣ ಕೊಡಿಸಿದ್ದು ಸುಮಲತಾ ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ನೀಡಿದ ನೂತನ ಸಂಸದೆ ಸುಮಲತಾಗೆ ಧನ್ಯವಾದ ಎಂಬುದಾಗಿ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ.
ಆದರೆ, ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಕೇಂದ್ರದಿಂದ ಪರಿಹಾರದ ಹಣ ಕೊಡಿಸಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸುಮಲತಾ ಅಲ್ಲ ಎಂದು ವಾಗ್ವಾದಕ್ಕಿಳಿದಿದ್ದಾರೆ. 
ಈ ಬಗ್ಗೆ ಮಂಡ್ಯದ ಮಾಚಹಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಅನುದಾನ ಯಾರು ಕೊಟ್ಟಿದ್ದಾರೆ/ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ. ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ ಎಂದು ಹೇಳಿದರು. 
ಇನ್ನು ಆ ರೀತಿ ತಪ್ಪು ಯಾರೂ ಮಾಡಬಾರದು ನಾನಂತೂ ಆ ತಪ್ಪು ಮಾಡೋದಿಲ್ಲ. ಅದನ್ನ ಪ್ರಚಾರಕ್ಕೆ ಬಳಸೋದು ನನಗಿಷ್ಟ ಇಲ್ಲ. ಹಿಂದೆಯಿಂದಲೂ ನಾನು ಸಾಕಷ್ಟು ಸಲ ಹೇಳಿದ್ದೀನಿ. ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು ಎಂದರು.
ಯಾರೇ ಮಾಡಿರಲಿ. ಅದನ್ನ ಹೇಳಿಕೊಳ್ಳಬಾರದು. ಯಾರು ಬೇಕಾದರೂ ಇದರ ಕ್ರೆಡಿಟ್ ತೆಗೆದುಕೊಳ್ಳಲಿ. ನನಗೆ ಆ ಬಗ್ಗೆ ಬೇಜಾರ್ ಏನೂ ಇಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ ಅದನ್ನ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ. ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡ್ತೀನಿ ಎಂದು ಸುಮಲತಾ ಅಂಬರೀಶ್​ ತಿಳಿಸಿದ್ದಾರೆ.
SCROLL FOR NEXT