ದೇಶ

ಮುಷ್ಕರ ಹಿಂಪಡೆಯಲು ಮಮತಾ ಬ್ಯಾನರ್ಜಿ ಕ್ಷಮೆಯಾಚನೆ ಸೇರಿ 7 ಷರತ್ತು ವಿಧಿಸಿದ ವೈದ್ಯರು

Lingaraj Badiger
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಪಡೆಯಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈದ್ಯ ಸಮುದಾಯದ ಬೇಷರತ್‌ ಕ್ಷಮೆಯಾಚನೆ ಸೇರಿದಂತೆ ಮುಷ್ಕರ ನಿರತ ವೈದ್ಯರು ಏಳು ಷರತ್ತುಗಳನ್ನು ವಿಧಿಸಿದ್ದಾರೆ.
ಎಸ್ಎಸ್ ಕೆಎಂ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಗಳು ತಾವು ನಡೆದುಕೊಂಡ ರೀತಿಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕಿರಿಯ ವೈದ್ಯರ ವೇದಿಕೆಯ ವಕ್ತಾರ ಡಾ. ಅರಿಂದಾಮ್ ದತ್ತ ಅವರು ಹೇಳಿದ್ದಾರೆ.
ತಮ್ಮ ಷರತ್ತುಗಳನ್ನು ಪಟ್ಟಿ ಮಾಡಿದ ದತ್ತ ಅವರು, ಮುಖ್ಯಮಂತ್ರಿಗಳು ಬೇಷರತ್ ಕ್ಷಮೆಯಾಚಿಸಬೇಕು, ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವೈದ್ಯರ ಆರೋಗ್ಯ ವಿಚಾರಿಸಬೇಕು. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ನೀಡಬೇಕು. ವೈದ್ಯರಿಗೆ ರಕ್ಷಣೆ ನೀಡದ ಪೊಲೀಸರ ವಿರುದ್ಧ ನ್ಯಾಯಾಂಗ ತನಿಖೆಗೆ ನಡೆಸಬೇಕು. ಅಲ್ಲದೆ ನಮ್ಮ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಂಡ ಬಗ್ಗೆ ದಾಖಲೆ ನೀಡಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.
ಇದೇ ವೇಳೆ ಪ್ರತಿಭಟನಾ ನಿರತ ಕಿರಿಯ ವೈದ್ಯರ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಗುರುವಾರ ಎಸ್ಎಸ್ ಕೆ ಎಂ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿ, ಹೊರಗಿನವರು ವೈದ್ಯಕೀಯ ಕಾಲೇಜ್ ಗೆ ನುಗ್ಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಮತ್ತು ಇದು ಸಿಪಿಐಎಂ ಹಾಗೂ ಬಿಜೆಪಿಯ ಪಿತೂರಿ ಎಂದು ಆರೋಪಿಸಿದ್ದರು. ಅಲ್ಲದೆ 4 ಗಂಟೆಗಳ ಗಡುವು ವಿಧಿಸಿ ಅಷ್ಟರೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ವೈದ್ಯ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಂದ ತೆರವುಗೊಳಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದರು.
SCROLL FOR NEXT