ದೇಶ

ವೈದ್ಯರ ಮುಷ್ಕರ, ರಾಜಕೀಯ ಹಿಂಸಾಚಾರ: ಪಶ್ಚಿಮ ಬಂಗಾಳ ಸರ್ಕಾರದಿಂದ ಪ್ರತ್ಯೇಕ ವರದಿ ಕೇಳಿದ ಕೇಂದ್ರ

Lingaraj Badiger
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ವೈದ್ಯರ ಮುಷ್ಕರ ಹಾಗೂ ರಾಜಕೀಯ ಹಿಂಸಾಚಾರದ ಬಗ್ಗೆ ಎರಡು ಪ್ರತ್ಯೇಕ ವರದಿಗಳನ್ನು ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರಿದಿರುವ ಬಗ್ಗೆ ಮತ್ತು ವೈದ್ಯರ ಸುರಕ್ಷತೆ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಿಂದ ವೈದ್ಯರು ಮತ್ತು ವೈದ್ಯಕೀಯ ಸಂಘಗಳ ಹಲವಾರು ಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಸಚಿವಾಲಯಕ್ಕೆ ದೂರು ನೀಡಿದ್ದಾರೆ ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ವೈದ್ಯರ ಮುಷ್ಕರದ ಕುರಿತು ವರದಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು,  2016 ರಿಂದ 2019 ರವರೆಗೆ ರಾಜಕೀಯ ಹಿಂಸಾಚಾರದ ಪ್ರವೃತ್ತಿ ಹೆಚ್ಚುತ್ತಲೆ ಬಂದಿದೆ. ಇದು ಜನರಲ್ಲಿ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟಿಸಿದ್ದು, ಪಶ್ಚಿಮ ಬಂಗಾಳದ ಪರಿಸ್ಥಿತಿಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚಿಸಿದೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರ ಬೇಡಿಕೆಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿನ 48 ಗಂಟೆಗಳಲ್ಲಿ ಈಡೇರಿಸದಿದ್ದರೆ, ಅನಿರ್ದಿಷ್ಟ ಮುಷ್ಕರ ಆರಂಭಿಸುವುದಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ದ್ವೇಷ ಸಾಧಿಸುವ ಹಾಗೂ ತಪ್ಪೊಪ್ಪಿಕೊಳ್ಳದ ಪಶ್ಚಿಮ ಬಂಗಾಳ ಸರ್ಕಾರದ ಧೋರಣೆಯನ್ನು ನಾವು ಖಂಡಿಸುತ್ತೇವೆ. ದೆಹಲಿಯ ಏಮ್ಸ್ ನಲ್ಲಿ ನಮ್ಮ ಪ್ರತಿಭಟನೆ ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಏಮ್ಸ್ ವೈದ್ಯರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
SCROLL FOR NEXT