ದೇಶ

ರಾಯ್ಪುರ: ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿಯೇ ಮಕ್ಕಳ ಮೇಲೆ ದೌರ್ಜನ್ಯ, 26 ಬಾಲ ಕಾರ್ಮಿಕರ ರಕ್ಷಣೆ

Sumana Upadhyaya
ರಾಯ್ಪುರ: ಪಾರ್ಲೆ-ಜಿ ಬಿಸ್ಕತ್ತು ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಆದರೆ ಇದೇ ಬಿಸ್ಕತ್ತು ತಯಾರಿಸುವ ಫ್ಯಾಕ್ಟರಿಯಿಂದ 26 ಬಾಲ ಕಾರ್ಮಿಕರನ್ನು ಜಿಲ್ಲಾ ಕಾರ್ಯಪಡೆ ಅಧಿಕಾರಿಗಳು ರಕ್ಷಿಸಿದ ಘಟನೆ ರಾಯ್ಪುರದಲ್ಲಿ ನಡೆದಿದೆ. 
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಾವು ಕಾರ್ಯಾಚರಣೆ ನಡೆಸಿ 26 ಮಕ್ಕಳನ್ನು ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಯಿಂದ ರಕ್ಷಿಸಿದೆವು ಎಂದು ಜಿಲ್ಲಾ ಮಕ್ಕಳ ರಕ್ಷಣೆ ಅಧಿಕಾರಿ ನವನೀತ್ ಸ್ವರ್ಣಾಂಕರ್ ತಿಳಿಸಿದ್ದಾರೆ.
ರಾಯ್ಪುರದ ಅಮಸಿವ್ನಿ ಪ್ರದೇಶದಲ್ಲಿ ಫ್ಯಾಕ್ಟರಿಯಲ್ಲಿ 12ರಿಂದ 16 ವರ್ಷದೊಳಗಿನ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದು ಫ್ಯಾಕ್ಟರಿಗೆ ಹೋಗಿ ಕಾರ್ಯಾಚರಣೆ ನಡೆಸಿದಾಗ ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶ, ಜಾರ್ಖಂಡ್, ಒಡಿಶಾ ಮತ್ತು ಬಿಹಾರ ಮೂಲದ ಮಕ್ಕಳಾಗಿದ್ದರು.
ಮಕ್ಕಳು ನೀಡಿರುವ ಮಾಹಿತಿ ಪ್ರಕಾರ ಅವರು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತಿಂಗಳಿಗೆ 5ರಿಂದ 7 ಸಾವಿರ ರೂಪಾಯಿ ವೇತನಕ್ಕೆ ದುಡಿಯುತ್ತಿದ್ದರು. 
ದೇಶದಲ್ಲಿ ಬ್ರಾಂಡ್ ಕಂಪೆನಿಯಾಗಿ ಗುರುತಿಸಿಕೊಂಡಿರುವ ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದುರದೃಷ್ಟಕರ ಎನ್ನುತ್ತಾರೆ ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಸಮೀರ್ ಮಾಥುರ್.
ಮಕ್ಕಳನ್ನು ರಕ್ಷಿಸಿದ ನಂತರ ಸರ್ಕಾರದ ಆಶ್ರಯ ಮನೆಗಗೆ ಕಳುಹಿಸಲಾಗಿದ್ದು ಫ್ಯಾಕ್ಟರಿ ಮಾಲಿಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
SCROLL FOR NEXT