ದೇಶ

17ನೇ ಲೋಕಸಭೆ: ಹಂಗಾಮಿ ಸ್ಪೀಕರ್ ಆಗಿ ವೀರೇಂದ್ರ ಕುಮಾರ್ ಪ್ರಮಾಣವಚನ

Sumana Upadhyaya
ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಏಳು ಬಾರಿ ಸಂಸದರಾಗಿರುವ ವಿರೇಂದ್ರ ಕುಮಾರ್ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ವೀರೇಂದ್ರ ಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
1996ರಲ್ಲಿ ಮೊದಲ ಬಾರಿಗೆ 11ನೇ ಲೋಕಸಭೆಗೆ ಸದಸ್ಯರಾಗಿ ಆಯ್ಕೆಯಾದ ವೀರೇಂದ್ರ ಕುಮಾರ್ ಕಾರ್ಮಿಕ ಇಲಾಖೆಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ನಂತರ 12,13,14,15,16 ಮತ್ತು 17ನೇ ಲೋಕಸಭೆಗೆ ಸತತವಾಗಿ ಆಯ್ಕೆಯಾಗಿ ಬಂದರು. ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 2017ರಿಂದ ಮೇ 2019ರವರೆಗೆ ವೀರೇಂದ್ರ ಕುಮಾರ್ ಅಲ್ಪಸಂಖ್ಯಾತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಇಂದು ಸಂಸತ್ತಿನ ಕೆಳಮನೆಯಲ್ಲಿ ಪ್ರಧಾನ ಮಂತ್ರಿ, ಕೇಂದ್ರ ಸಂಪುಟ ಸಚಿವರು ಸೇರಿದಂತೆ ಲೋಕಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಸಭೆಯಲ್ಲಿ ಇಂದು ಮತ್ತು ನಾಳೆ ನೂತನ ಸಂಸದರ ಪ್ರಮಾಣವಚನ ನಡೆಯಲಿದ್ದು ನಾಡಿದ್ದು 19ರಂದು ಸ್ಪೀಕರ್ ಚುನಾವಣೆ ನಡೆಯಲಿದೆ. ಜೂನ್ 20ರಂದು ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
ಸಾಮಾನ್ಯವಾಗಿ ಸದನದ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗುತ್ತದೆ. ನೂತನ ಸದಸ್ಯರ ಪ್ರಮಾಣವಚನದ ಉಸ್ತುವಾರಿ ನೋಡಿಕೊಳ್ಳುವುದು ಮತ್ತು ಖಾಯಂ ಸ್ಪೀಕರ್ ಚುನಾವಣೆ ಉಸ್ತುವಾರಿ ವಹಿಸುವುದು ಅವರ ಕೆಲಸವಾಗಿರುತ್ತದೆ.
SCROLL FOR NEXT