ದೇಶ

17ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಆರಂಭ; ಹಲವು ಮಸೂದೆ ಮಂಡನೆ ನಿರೀಕ್ಷೆ

Sumana Upadhyaya
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರದ ಮೊದಲ ಲೋಕಸಭಾ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದು ಈ ಬಾರಿಯ ಅಧಿವೇಶನದಲ್ಲಿ ಹಲವು ನೂತನ ಶಾಸನಗಳು ಮಂಡನೆಗೆ ಕಾಯುತ್ತಿದೆ. 
ಕಾರ್ಮಿಕ ಸುಧಾರಣೆಗಳು, ತ್ರಿವಳಿ ತಲಾಖ್ ಮತ್ತು ಹೊಸ ಸರ್ಕಾರದ ಬಜೆಟ್ ಈ ಬಾರಿಯ ಅಧಿವೇಶನದ ಪ್ರಮುಖ ಅಂಶಗಳಾಗಿವೆ. 
ನಿನ್ನೆ ಪ್ರಧಾನಿಯವರು ಸರ್ವಪಕ್ಷ ಸಭೆ ಮತ್ತು ಬಿಜೆಪಿ ಸಂಸದೀಯ ಪಕ್ಷದ ಸಭೆ ಹಾಗೂ ಎನ್ ಡಿಎ ಮೈತ್ರಿಕೂಟಗಳ ಸಭೆಯನ್ನು ಕರೆದಿದ್ದರು. 
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಘೋಷಣೆಯ ಚುನಾವಣಾ ಪ್ರಣಾಳಿಕೆಯನ್ನು ಜಾರಿಗೆ ತರುವ ಶಾಸನವನ್ನು ತರಲು ಉತ್ಸುಕವಾಗಿದೆ. ಸಬ್ ಕಾ ವಿಶ್ವಾಸ್ ಅಂಶವನ್ನು ಬಹಳ ಹತ್ತಿರದಿಂದ ಗಮನಿಸಲಾಗುತ್ತಿದ್ದು ಸರ್ಕಾರದ ಹೊಸ ದಿಕ್ಕಿನೆಡೆಗೆ ಸ್ಪಷ್ಟತೆ ಸಿಗುತ್ತದೆ ಎಂದರು.
ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಕುರಿತು ಚರ್ಚೆ ನಡೆಸಲು ಇದೇ ಬುಧವಾರ ಸಂಸತ್ತಿನಲ್ಲಿ ಸಭೆ ನಡೆಸಲಾಗುತ್ತಿದ್ದು ಅದಕ್ಕೆ ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಎಲ್ಲಾ ಪಕ್ಷಗಳ ಅಧ್ಯಕ್ಷರುಗಳನ್ನು ಆಹ್ವಾನಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಸರ್ಕಾರದ ಎಲ್ಲಾ ಪಾಲುದಾರರು ಒಗ್ಗೂಡುವಿಕೆಯಿಂದ ಕೆಲಸ ಮಾಡುವಂತೆ ಕರೆ ನೀಡಿದರೆ ವಿರೋಧ ಪಕ್ಷಗಳ ನಾಯಕರು ನಿರುದ್ಯೋಗ ಸಮಸ್ಯೆ, ಜಮ್ಮು-ಕಾಶ್ಮೀರ ಚುನಾವಣೆ, ರೈತರ ಸಮಸ್ಯೆಗಳು, ಬರಗಾಲ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದರು.
ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರೇನ್ ಉಪಸ್ಥಿತರಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಯುಕ್ತ ವ್ಯವಸ್ಥೆ ದುರ್ಬಲವಾಗುತ್ತಿದ್ದು ರಾಜ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ನಾವು ಒಪ್ಪುವುದಿಲ್ಲ. ಪತ್ರಿಕಾ ಸ್ವಾತಂತ್ರ್ಯ ಕೂಡ ಮುಖ್ಯವಾಗುತ್ತದೆ. ಆಡಳಿತಾರೂಢ ಪಕ್ಷದ ಕಾರ್ಯಕರ್ತರು ಪತ್ರಕರ್ತರ ಜೊತೆ ತೋರಿಸುತ್ತಿರುವ ವರ್ತನೆ ಕುರಿತು ಕೂಡ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಗುಲಾಂ ನಬಿ ಆಜಾದ್ ತಿಳಿಸಿದರು.
ಮಹಿಳಾ ಮೀಸಲಾತಿ ಮಸೂದೆ ಕೂಡ ಮಂಡನೆಯಾಗಬೇಕೆಂದು ತೃಣಮೂಲ ಕಾಂಗ್ರೆಸ್ ಒತ್ತಾಯಿಸಿದೆ. ಅಲ್ಲದೆ ಚುನಾವಣಾ ಸುಧಾರಣೆ, ಚುನಾವಣೆಗಳಲ್ಲಿ ರಾಜ್ಯ ಸರ್ಕಾರಗಳ ಹಣ ಮತ್ತು ಪೇಪರ್ ಬ್ಯಾಲಟ್ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು.
SCROLL FOR NEXT