ದೇಶ

ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು: ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಗೆ ಜೀವಾವಧಿ ಶಿಕ್ಷೆ

Srinivasamurthy VN
ಅಹ್ಮದಾಬಾದ್: 29 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುಜರಾತ್ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 1990ರಲ್ಲಿ ಸಂಭವಿಸಿದ್ದ ತಮ್ಮ ಕಸ್ಟಡಿಯಲ್ಲಿದ್ದ ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಸಂಜೀವ್ ಭಟ್ ಅವರಿಗೆ ಗುಜರಾತ್ ನ ಜಾಮ್ ನಗರ ಕೋರ್ಟ್ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣ ಸಂಭವಿಸಿದ ಸಂದರ್ಭದಲ್ಲಿ ಸಂಜೀವ್ ಭಟ್ ಗುಜರಾತ್ ನ ಹೆಚ್ಚುವರಿ ಸೂಪರಿಂಟೆಂಡ್ ಆಫ್ ಪೊಲೀಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೋಮುಗಲಭೆ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂಜೀವ್ ಭಟ್ ಅವರು ಈ ಸಂಬಂಧ ನೂರಾರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈ ಪೈಕಿ ಸುಮಾರು 30 ವರ್ಷದ ವ್ಯಕ್ತಿಯೋರ್ವ ಪೊಲೀಸ್ ಠಾಣೆಯಿಂದ ಬಿಡುಗಡೆಯಾಗುತ್ತಲೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈ ಸಂಬಂಧ ಸಂಜೀವ್ ಭಟ್ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. 
2011ರಲ್ಲಿ ಸಂಜೀವ್ ಭಟ್ ಅವರನ್ನು ಗುಜರಾತ್ ಸರ್ಕಾರ ಅಮಾನತು ಮಾಡಿತ್ತು. ಆ ಬಳಿಕವೂ ಕೂಡ ಸಂಜೀವ್ ಭಟ್ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು. ಅಮಾನತ್ತಾಗಿದ್ದರೂ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಿ ವಾಹನಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದೂ ಆರೋಸಿ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ 2015ರ ಆಗಸ್ಟ್ ನಲ್ಲಿ ಅವರನ್ನು ಕೆಲಸದಿಂದಲೇ ವಜಾ ಮಾಡಲಾಗಿತ್ತು. 
ಇತ್ತೀಚೆಗಷ್ಟೇ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು, 1989ರ ಈ ಪ್ರಕರಣದ 11 ಹೆಚ್ಚುವರಿ ಸಾಕ್ಷ್ಯಗಳ ಪರಿಶೀಲಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಸಂಜೀವ್ ಭಚ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. 
SCROLL FOR NEXT