ದೇಶ

ಅಶ್ವಗಳ ಮೇಲೆ ಯೋಗ, ರಕ್ತವನ್ನೇ ಹೆಪ್ಪುಗಟ್ಟಿಸುವ ಮಂಜಿನ ನಡುವೆ ಸೈನಿಕರ ಸಾಹಸ

Srinivasamurthy VN
ನವದೆಹಲಿ: ವಿಶ್ವ ಯೋಗದಿನದ ಪ್ರಯುಕ್ತ ಅತ್ತ ರಾಂಚಿಯಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಗೆ ಚಾಲನೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಸೈನಿಕರು ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಜು ಅವರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.  ಅಂತೆಯೇ ಅತ್ತ ಹಿಮಾಚಲ ಪ್ರದೇಶದ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು 14 ಸಾವಿರ ಅಡಿ ಎತ್ತರದ ರೋಹ್ಟಂಗ್ ಪಾಸ್ ನಲ್ಲಿ ಮೈನಸ್ 10 ಡಿಗ್ರಿ ಚಳಿಯಲ್ಲಿ ಯೋಗ ಮಾಡಿ ಸಾಮರ್ಥ್ಯ ಪ್ರದರ್ಶನ ಮಾಡಿದರು. ಅಂತೆಯೇ ಇಂಡೋ-ಚೀನಾ ಗಡಿಯ ಕಿನ್ನೌರ್ ಜಿಲ್ಲೆಯಲ್ಲೂ ಐಟಿಬಿಪಿ ಸೈನಿಕರು ಯೋಗ ಪ್ರದರ್ಶನ ಮಾಡಿದರು.
ಇನ್ನು ಹರ್ಯಾಣದಲ್ಲಿ ಬಿಎಸ್ಎಫ್ ಯೋಧರು ಅಶ್ವಗಳ ಮೇಲೆ ನಿಂತು ಯೋಗ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಗುರುಗ್ರಾಮದಲ್ಲಿರುವ ಬಿಎಸ್ಎಫ್ ಕ್ಯಾಂಪ್ ನಲ್ಲಿನ ನುರಿತ ಅಶ್ವಗಳ ಮೇಲೆ ಸೈನಿಕರು ಯೋಗ ಪ್ರದರ್ಶನ ನೀಡಿದರು. ಇತ್ತ ಜಮ್ಮುವಿನಲ್ಲಿ ಬಿಎಸ್ಎಫ್ ಪಡೆಯ ಶ್ವಾನದಳ  ತರಬೇತಿದಾರರೊಂದಿಗೆ ಯೋಗ ಮಾಡಿದವು. ಇತ್ತ ಕಾಶ್ಮೀರದ ಲಡಾಖ್ ನಲ್ಲಿ ಐಟಿಬಿಪಿ ಸಿಬ್ಬಂದಿಗಳು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಯೋಗ ಮಾಡಿದರು. ಅಂತೆಯೇ ಸಿಕ್ಕಿಂನ 19 ಸಾವಿರ ಅಡಿ ಎತ್ತರದ ಒಪಿ ಡೋರ್ಜಿಲಾದಲ್ಲಿ ಸೈನಿಕರು ಮೈನಸ್ 15 ಡಿಗ್ರಿ ಚಳಿಯಲ್ಲಿ ಮಂಜಿನ ನಡುವೆ ಯೋಗಾಭ್ಯಾಸ ಮಾಡಿದರು.
SCROLL FOR NEXT