ಕೊಲೆಯಾದ ಅರ್ಚನಾ ಮತ್ತು ಆಕೆಯ ಆರೋಪಿ ಪತಿ ಶುಕ್ಲಾ
ನವದೆಹಲಿ: ವ್ಯಕ್ತಿಯೊಬ್ಬ ತನ್ನ 2 ತಿಂಗಳ ಹಸುಗೂಸು ಸೇರಿ ಮೂವರು ಮಕ್ಕಳು ಹಾಗೂ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮಹ್ರೌಲಿ ಎಂಬಲ್ಲಿ ಭೀಭತ್ಸ ಘಟನೆ ನಡೆದಿದ್ದು, ಉಪೇಂದ್ರ ಶುಕ್ಲಾ ಎಂಬಾತ ಕೃತ್ಯ ಎಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಾಣಂತಿಯಾಗಿದ್ದ ಪತ್ನಿ ಅರ್ಚನಾ, 2 ತಿಂಗಳ ಮಗು, 5 ವರ್ಷದ ಮಗ ಮತ್ತು 7 ವರ್ಷದ ಮಗಳನ್ನು ಹರಿತವಾದ ಚಾಕುವಿನಿಂದ ಇರಿದು ನಿಷ್ಕರುಣವಾಗಿ ಹತ್ಯೆಗೈದಿದ್ದಾನೆ. ಶನಿವಾರ ಮುಂಜಾನೆ ಈ ಕೃತ್ಯ ನಡೆದಿದೆ.
ಆರೋಪಿ ಶುಕ್ಲಾ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ, ಕೊಲೆ ನಡೆಯುವ ಸಮಯದಲ್ಲಿ ಆರೋಪಿಯ ಅತ್ತೆ ಮೆರ್ಹ್ರುಲಿಯಲ್ಲಿರುವ ತಮ್ಮ ನಿವಾಸದಲ್ಲಿದ್ದರು.
ಶನಿವಾರ ಬೆಳಗ್ಗೆ ಮನೆಯ ಬಾಗಿಲು ತೆರೆಯದಿದ್ದಾಗ ಆಕೆ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ, ಬಾಗಿಲು ಮುರಿದು ಒಳ ಬಂದಾಗ ರ್ಕತದ ಮಡುವಿನಲ್ಲಿ ಬಿದ್ದಿದ್ದ ಶವಗಳ ಪಕ್ಕವೇ ಆರೋಪಿ ಕುಳಿತಿದ್ದ. ಅನಂತರ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಆತನನ್ನು ಬಂಧಿಸಿದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆದರೆ ಯಾವ ಕಾರಣಕ್ಕೆ ತಾನು ಕೊಲೆ ಮಾಡಿದೆ ಎಂಬುದನ್ನು ಆತ ಬಹಿರಂಗ ಪಡಿಸಿಲ್ಲ, ಕೃತ್ಯಕ್ಕೆ ಬಳಸಲಾದ ಚೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.