ದೇಶ

ಕಾಶ್ಮೀರದಲ್ಲಿ 113 ಉಗ್ರರ ಹತ್ಯೆ, 2014ರಿಂದೀಚಿಗೆ ಭಯೋತ್ಪಾದಕ ಘಟನೆಗಳು ಮೂರು ಪಟ್ಟು ಹೆಚ್ಚಳ

Srinivasamurthy VN
ನವದೆಹಲಿ: 2014ರಿಂದ ಇಲ್ಲಿಯವರೆಗೂ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 733 ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಹಾಲಿ ವರ್ಷವೊಂದರಲ್ಲೇ 113 ಉಗ್ರರನ್ನು ಸೇನಾ ಪಡೆಗಳು ಕೊಂದು ಹಾಕಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿರುವ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು, ಹಾಲಿ ವರ್ಷ ಜಮ್ಮು ಮತ್ತು ಕಾಶ್ಮೀರದದಲ್ಲಿ 113 ಮಂದಿ ಉಗ್ರರನ್ನು ಸೇನಾಪಡೆಗಳು ಹೊಡೆದರುಳಿಸಿದ್ದು, 2014ರಿಂದೀಚಿಗೆ ಭಯೋತ್ಪಾದಕ ಘಟನೆಗಳು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂತೆಯೇ ಜೂನ್ 16ರವರೆಗೂ ಹಾಲಿ ವರ್ಷದಲ್ಲಿ 113 ಮಂದಿ ಉಗ್ರರನ್ನು ಸೇನಾಪಡೆಗಳು ವಿವಿಧ ಕಾರ್ಯಾಚರಣೆಗಳಲ್ಲಿ ಹೊಡೆದುರುಳಿಸಿದ್ದು, ಈ ಪೈಕಿ ರಾಜ್ಯದ 18 ಮಂದಿ ನಾಗರಿಕರೂ ಕೂಡ ಮೃತಪಟ್ಟಿದ್ದಾರೆ. 2014ರಿಂದೀಚಿಗೆ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮೂರು ಪಟ್ಟು ಹೆಚ್ಚಳವಾಗಿದ್ದು, 2018ರವರೆಗೂ 222 ಉಗ್ರ ಕೃತ್ಯಗಳು ದಾಖಲಾಗಿತ್ತು. ಆದರೆ 2019 ಜೂನ್ 16ರ ವೇಳೆಗೆ ಈ ಸಂಖ್ಯೆ 614ಕ್ಕೆ ಏರಿಕೆಯಾಗಿದೆ.
ಅಂತೆಯೇ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಉಗ್ರರ ಕುರಿತ ದತ್ತಾಂಶವನ್ನೂ ಬಿಡುಗಡೆ ಮಾಡಿದ್ದು, 2018ರಲ್ಲಿ ಅತೀ ಹೆಚ್ಚು ಅಂದರೆ 257 ಉಗ್ರರನ್ನು ಹೊಡೆದುರುಳಿಸಲಾಗಿದೆ. 2017ರಲ್ಲಿ 213 ಉಗ್ರರು, 2016ರಲ್ಲಿ 150 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
SCROLL FOR NEXT