ದೇಶ

ರಷ್ಯಾ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ಯುಎಸ್ ನಿರ್ಬಂಧದ ಕರಿ ನೆರಳು: ವಿನಾಯಿತಿ ವಿಶ್ವಾಸದಲ್ಲಿ ಭಾರತ

Srinivas Rao BV
ನವದೆಹಲಿ: ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಆಮದು ಮಾಡಿಕೊಳ್ಳಲು ಭಾರತ-ರಷ್ಯಾ ಒಪ್ಪಂದಕ್ಕೆ ಅಮೆರಿಕದ ನಿರ್ಬಂಧದ ಕರಿ ನೆರಳು ಆವರಿಸಿದೆ. ಈ ನಡುವೆ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಅಮೆರಿಕದ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 
ರಷ್ಯಾ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಆಮದು ಮಾಡಿಕೊಂಡರೂ ಅಮೆರಿಕ ಸರ್ಕಾರ ನಿರ್ಬಂಧದಿಂದ ವಿನಾಯಿತಿ ನೀಡಲಿದೆ ಎಂದು ಭಾರತದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಭಾರತ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜೊತೆ ಮಾತುಕತೆ ನಡೆಸಲಿದ್ದು, ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ರಾಯಭಾರಿ ಕಚೇರಿ ಅಧಿಕಾರಿಗಳು ಅಮೆರಿಕಾ ಸರ್ಕಾರದೊಂದಿಗೆ ಪ್ರತ್ಯೇಕ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಿರ್ಬಂಧಕ್ಕೆ ವಿನಾಯಿತಿ ಪಡೆಯುವುದಕ್ಕೆ ಅಮೆರಿಕದ ಸಂಸತ್ ಗೆ ಅಗತ್ಯವಿರುವ ಎಲ್ಲಾ ಬೇಡಿಕೆಗಳನ್ನು ಭಾರತ ಪೂರೈಸಲಿದ್ದು ಅಮೆರಿಕ ನಿರ್ಬಂಧದಿಂದ ವಿನಾಯಿತಿ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
S-400 ಟ್ರೈಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಭಾರತ 2018 ರ ಸೆಪ್ಟೆಂಬರ್ ನಲ್ಲಿ ರಷ್ಯಾದೊಂದಿಗೆ ಸಹಿ ಹಾಕಿತ್ತು. 
ರಷ್ಯಾದೊಂದಿಗೆ ಯಾವುದೇ ರೀತಿಯ ರಕ್ಷಣಾ ಹಾಗೂ ಗುಪ್ತಚರ ಸಂಸ್ಥೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು ಅಥವಾ ದೇಶಗಳ ವಿರುದ್ಧ ಅಮೆರಿಕ ಕ್ರಮ ಜರುಗಿಸುತ್ತದೆ, ಈ ಹಿನ್ನೆಲೆಯಲ್ಲಿ ರಷ್ಯಾದೊಂದಿಗಿನ ಈ ಒಪ್ಪಂದವನ್ನು ರದ್ದುಗೊಳಿಸುವಂತೆ ಭಾರತಕ್ಕೆ ಅಮೆರಿಕ ಒತ್ತಡ ಹೇರುತ್ತಿದ್ದು, ಒಪ್ಪಂದ ರದ್ದುಗೊಳ್ಳುವುದು ವಿಫಲವಾದರೆ ನಿರ್ಬಂಧ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. 
SCROLL FOR NEXT