ದೇಶ

ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವಿರುವುದನ್ನು ಮಾಡ್ತೀವಿ: ಎಸ್-400 ಖರೀದಿ ಬಗ್ಗೆ ಯುಎಸ್ ಗೆ ಭಾರತದ ದೃಢ ಸಂದೇಶ

Srinivas Rao BV
ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಅವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 
ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಜೈಶಂಕರ್, ರಷ್ಯಾದಿಂದ S-400 ಕ್ಷಿಪಣಿ ವ್ಯವಸ್ಥೆ ಖರೀದಿಸುವುದಕ್ಕೆ ಅಮೆರಿಕ ನಿರ್ಬಂಧ ಅಡ್ಡಿ ಬರುತ್ತದೆಯೇ ಎಂಬ ಪ್ರಶ್ನೆಗೂ ಉತ್ತರಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ಅಮೆರಿಕಾಗೆ ಹೇಳಿರುವುದಾಗಿ ತಿಳಿಸಿದ್ದಾರೆ. 
ಭಾರತ ಬೇರೆ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ತನ್ನ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತದೆ. ಭಾರತ ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಅದಕ್ಕೆ ಅದರದ್ದೇ ಆದ ಇತಿಹಾಸವೂ ಇದೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವಾಗಿದ್ದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ಆಳವಾಗಿದ್ದು, ಭಾರತ ಅಮೆರಿಕ ವಿದೇಶಾಂಗ ಸಚಿವರೊಂದಿಗೆ ಇಂಧನ, ವ್ಯಾಪಾರ, ಇಂಡೋ ಪೆಸಿಫಿಕ್ ಪ್ರದೇಶ, ಅಫ್ಘಾನಿಸ್ಥಾನದ ಪರಿಸ್ಥಿತಿ ಸೇರಿದಂತೆ ಹಲವು ಮುಖ್ಯ ವಿಷಯಗಳೊಂದಿಗೆ ಚರ್ಚೆ ನಡೆಸಿದೆ ಎಂದು ಹೇಳಿದ್ದಾರೆ. 
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಟ್ರಂಪ್ ಆಡಳಿತ ಬೆಂಬಲ ನೀಡಿರುವುದಕ್ಕೆ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಮೈಕ್ ಪೊಂಪಿಯೊ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
SCROLL FOR NEXT