ದೇಶ

ಭರ್ಜರಿ ಭೇಟೆ: ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಸಾಗಿಸಲಾಗುತ್ತಿದ್ದ 532 ಕೆಜಿ ಹೆರಾಯಿನ್ ವಶ

Srinivasamurthy VN
ಅಮೃತಸರ: ಮಹತ್ವದ ಕಾರ್ಯಾಚರಣೆಯಲ್ಲಿ ಕೇಂದ್ರ ಕಸ್ಟಮ್ಸ್ ಅಧಿಕಾರಿಗಳು ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೊಬ್ಬರಿ 532 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ವ್ಯಾವಹಾರಿಕ ಗಡಿ ಸಂಪರ್ಕ ಅಟ್ಟಾರಿ-ವಾಘಾ ಗಡಿ ಮೂಲಕ ಟ್ರಕ್ ವೊಂದರಲ್ಲಿ ಈ ಅಪಾರ ಪ್ರಮಾಣದ ಮಾದಕವಸ್ತುವನ್ನು ಕಳ್ಳ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಶಂಕೆಯ ಮೇರೆಗೆ ಅಧಿಕಾರಿಗಳು ಟ್ರಕ್ ಪರಿಶೀಲಿಸಿದಾಗ ಟ್ರಕ್ ನಲ್ಲಿ ಬರೊಬ್ಬರಿ 532 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಅಧಿಕಾರಿಗಳು ತಿಳಿಸಿರುವಂತೆ ಇದರ ಮೌಲ್ಯ ಸುಮಾರು 2,700 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಕಾಶ್ಮೀರ ಮೂಲದ ಕುಖ್ಯಾತ ಸ್ಮಗ್ಲರ್ ಈ ಕೃತ್ಯದ ಹಿಂದಿನ ರೂವಾರಿಯಾಗಿರುವ ಶಂಕೆ ಇದ್ದು, ಕಲ್ಲು ಉಪ್ಪಿನ ಲೇಪನ ಮಾಡಿ ಇದನ್ನು ಭಾರತಕ್ಕೆ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರಸ್ತುತ ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಸ್ಟಮ್ಸ್ ಆಯುಕ್ತ ದೀಪಕ್ ಕುಮಾರ್ ಗುಪ್ತಾ ಅವರು, ಒಟ್ಟು 532 ಕೆಜೆ ಹೆರಾಯಿನ್ ಮತ್ತು 52 ಕೆಜಿ ಮಿಶ್ರಣ ಮಾಡಿದ ನಾರ್ಕೋಟಿಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಅತೀ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಭಾರತೀಯ ಕಸ್ಟಮ್ಸ್ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
SCROLL FOR NEXT