ದೇಶ

ಲೋಕಸಭೆ ಚುನಾವಣೆಗೂ ಮುನ್ನ ಯುದ್ಧ ನಡೆಯುತ್ತೆ ಎಂದು ಬಿಜೆಪಿ 2 ವರ್ಷಗಳ ಹಿಂದೆಯೇ ನನಗೆ ಹೇಳಿತ್ತು: ಪವನ್ ಕಲ್ಯಾಣ್

Lingaraj Badiger
ಹೈದರಾಬಾದ್: 2019ರ ಲೋಕಸಭೆ ಚುನಾವಣೆಗೂ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ನನಗೆ ಹೇಳಿತ್ತು ಎಂದು ಖ್ಯಾತ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಹೇಳಿದ್ದಾರೆ.
ಕಡಪ ಜಿಲ್ಲೆಯಲ್ಲಿ ಪಕ್ಷದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ಚುನಾವಣೆ ಸಮೀಪಿಸುತ್ತಿದ್ದಂತೆ ಭಾರತ - ಪಾಕಿಸ್ತಾನ ನಡುವೆ ಯುದ್ಧ ನಡೆಯಲಿದೆ ಎಂದು ನನಗೆ ಎರಡು ವರ್ಷ ಮೊದಲೇ ಹೇಳಿದ್ದರು. ದೇಶದಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದರು.
ಪುಲ್ವಾಮ ಉಗ್ರ ದಾಳಿಯಿಂದ ಭಾರತ-ಪಾಕ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ. ಯುದ್ಧವಾದರೆ ಎರಡೂ ದೇಶಗಳಿಗೆ ದೊಡ್ಡ ಹಾನಿಯಾಗಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸೂಪರ್ ಸ್ಟಾರ್, ತಾವು ಮಾತ್ರ ದೇಶಭಕ್ತರು ಎಂಬಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ನಾವು ಬಿಜೆಪಿಗಿಂತ 10 ಪಟ್ಟು ದೇಶಾಭಿಮಾನಿಗಳು ಎಂದು ಹೇಳಿದರು.
ಇನ್ನು ಯುದ್ಧದ ಬಗ್ಗೆ ತಮಗೆ ಮೊದಲೇ ಗೊತ್ತಿತ್ತು ಎಂಬ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಚುನಾವಣೆಗೂ ಮುನ್ನ ಯುದ್ಧ ನಡೆಯುತ್ತೆ ಅಂತ ನನಗೆ ಯಾರೂ ಹೇಳಿಲ್ಲ. ಗುಪ್ತಚರ ಮಾಹಿತಿ ಆಧಾರದ ಕೆಲವು ರಾಜಕೀಯ ವಿಶ್ಲೇಷಕರು ನೀಡಿದ ಮಾಹಿತಿ ಆಧಾರದ ಮೇಲೆ ಹೇಳಿದ್ದೇನೆ ಎಂದರು.
SCROLL FOR NEXT