ದೇಶ

ಕಾಂಗ್ರೆಸ್ ನಲ್ಲಿ ಮಕ್ಕಳಾಗದಿದ್ದರೂ ಅದಕ್ಕೆ ಬಿಜೆಪಿಯನ್ನು ದೂಷಿಸುತ್ತಾರೆ: ಅರವಿಂದ ಲಿಂಬಾವಳಿ

Srinivas Rao BV
ಬೆಂಗಳೂರು: ಕಾಂಗ್ರೆಸ್  ಪಾರ್ಟಿಯಲ್ಲಿ ಯಾರಿಗಾದರೂ ಮಕ್ಕಳಾಗದಿದ್ದರೆ ಅದಕ್ಕೂ ಬಿಜೆಪಿಯನ್ನು ಹೊಣೆ ಮಾಡಿ ಟೀಕಿಸುತ್ತಾರೆ ಎಂದು ಶಾಸಕ ಹಾಗೂ ಹಿರಿಯ ಮುಖಂಡ ಅರವಿಂದ ಲಿಂಬಾವಳಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು,  ಪ್ರತಿಯೊಂದಕ್ಕೂ ಬಿಜೆಪಿಯನ್ನು ಗುರಿಮಾಡಿಕೊಂಡು ಆರೋಪಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಹ ಅದಕ್ಕೆ ಬಿಜೆಪಿಯನ್ನು ಹೊಣೆ ಮಾಡಲಾಗುತ್ತಿದೆ. ಹೀಗೆ ಬಿಜೆಪಿ ವಿರುದ್ಧ ಹರಿಹಾಯ್ದರೆ ಜನ ನಂಬುವುದಿಲ್ಲ. ಜನರಿಗೆ ಎಲ್ಲವೂ ಅರ್ಥವಾಗುತ್ತೆ ಎಂದರು.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಜಾಧವ್ ರಾಜೀನಾಮೆಯಿಂದ ಬಹಿರಂಗಗೊಂಡಿದೆ. ಶಾಸಕರಿಗೆ ಸರಿಯಾಗಿ ಅನುದಾನ  ನೀಡಿಲ್ಲ‌. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂದರು.
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಆಡಳಿತ ಪಕ್ಷದ ಶಾಸಕರ ನಡುವೆ ಹೊಡೆದಾಟ ನಡೆಯಿತು. ಈ ಸಮಸ್ಯೆ ಬಗೆಹರಿಸಲು ಆಗದೆ‌ ಬಿಜೆಪಿ ಮೇಲೆ ಅನಗತ್ಯವಾಗಿ ಕಾಂಗ್ರೆಸ್ ನವರು ಗೂಬೆ ಕೂರಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡುತ್ತಿರುವುದೇ ಇವರ ಹೊಟ್ಟೆ ಉರಿಗೆ ಕಾರಣ. ಬಿಜೆಪಿ ರಾಷ್ಟ್ರೀಯ ಪಕ್ಷ ಆಗಿರುವುದರಿಂದ ಯಮೇಶ್ ಜಾಧವ್ ಅವರಿಗೆ ಬಿಜೆಪಿಗೆ ಸೇರಲು ಮನಸ್ಸಾಗಿರಬಹುದು ಎಂದು ಲಿಂಬಾವಳಿ ಹೇಳಿದರು.
ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವರ್ತನೆಯಿಂದ ಉಮೇಶ್ ಜಾಧವ್ ಅಸಮಾಧಾನಗೊಂಡಿರಬಹದು. ಇದೂ ಸಹ ಅವರು  ರಾಜೀನಾಮೆ ನೀಡಲು ಕಾರಣ ಇರಬಹುದು. ದಿನೇಶ್ ಗುಂಡೂರಾವ್ ‌ಇವತ್ತು ಇದ್ದಕ್ಕಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಗಳುತ್ತಿದ್ದಾರೆ. ಇಷ್ಟು ದಿನ ಉಮೇಶ್ ಜಾಧವ್ ಅವರನ್ನು ಸಮಾಧಾನ ಮಾಡುತ್ತಿದ್ದರು. ತಮ್ಮೊಳಗಿನ ಹುಳುಕು ಮುಚ್ಚಿಕೊಳ್ಳಲು ಈಗ ಬಿಜೆಪಿಯನ್ನು ದೂರುತ್ತಿದ್ದಾರೆ. ಈ ಧ್ವಂದ್ವ ಧೋರಣೆ ಸರಿಯಲ್ಲ ಎಂದರು. 
ಉಮೇಶ್ ಜಾದವ್ ಕಲಬುರ್ಗಿಯಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಬರುವ ದಿನಗಳಲ್ಲಿ ಏನು ಬೇಕಾದರೂ ಬೆಳವಣಿಗೆ ಆಗಬಹುದು. ಇನ್ನೂ ಅನೇಕ ನಾಯಕರು ಅಂದರೆ ಶಾಸಕರು, ಮಾಜಿ ಶಾಸಕರು, ನಾಯಕರು ಯಾರಾದರೂ ಬಿಜೆಪಿ ಸೇರಬಹುದು. ಮೋದಿ ಆಡಳಿತ ನೋಡಿ ಬಿಜೆಪಿಗೆ ಬರುತ್ತಿದ್ದಾರೆ. ದೇಶದ ಜನ ಮೋದಿ ಅವರನ್ನು ಬೆಂಬಲಿಸುತ್ತಿದ್ದು, ಇದರಿಂದ ಕಾಂಗ್ರೆಸ್ ನವರಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ ಎಂದರು.
ನಾವು ಗುಲ್ಬರ್ಗ ಮಾತ್ರವಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಉದ್ದೇಶ ಹೊಂದಿದ್ದೇವೆ. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರ ಕೂಡ ಒಂದು. ಚುನಾವಣೆ ಸಂದರ್ಭದಲ್ಲಿ ಎಲ್ಲ ರೀತಿಯ ಬೆಳವಣಿಗೂ ಆಗುತ್ತದೆ. ಅದಕ್ಕಾಗಿ ಕಾದು ನೋಡಿ ಎಂದು ಅರವಿಂದ ಲಿಂಬಾವಳಿ ಹೇಳಿದರು.
SCROLL FOR NEXT