ದೇಶ

ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಇಲ್ಲ: ಕಾಂಗ್ರೆಸ್

Srinivas Rao BV
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಡ ಬಿಜೆಪಿಯನ್ನು ಎದುರಿಸಲು ದೇಶದಲ್ಲಿ ರೂಪುಗೊಳ್ಳುತ್ತಿರುವ ಮಹಾಘಟಬಂಧನದಲ್ಲಿ ಸ್ಥಾನ ಪಡೆಯಲು ಹವಣಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ಆರಂಭದಲ್ಲೇ ಹಿನ್ನೆಡೆಯಾಗಿದೆ. 
ಮಹಾಮೈತ್ರಿಯ ಭಾಗವಾಗಿ ದೆಹಲಿಯಲ್ಲಿ ಕೂಡ ಕಾಂಗ್ರೆಸ್‍ ಹಾಗೂ ಆಡಳಿತಾರೂಡ ಆಮ್‍ ಆದ್ಮಿ ಪಕ್ಷಗಳು ಕೈಜೋಡಿಸಲಿವೆ ಎಂಬ ವದಂತಿಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಶೀಲಾ ದೀಕ್ಷಿತ್ ಸಾರಾಸಗಟಾಗಿ ನಿರಾಕರಿಸಿದ್ದಾರೆ. 
ಕಾಂಗ್ರೆಸ್‍ ಅಧ್ಯಕ್ಷ ರಾಹುಲ್‍ ಗಾಂಧಿ ಅವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಎಎಪಿಯೊಂದಿಗೆ ಕೈಜೋಡಿಸಲು ಸಹಮತ ವ್ಯಕ್ತವಾಗಲಿಲ್ಲ. ಸಭೆಯ ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಶೀಲಾ ದೀಕ್ಷಿತ್, ಎಎಪಿಯೊಂದಿಗೆ ಕೈಜೋಡಿಸದಿರಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಒತ್ತಾಯದ ಮೇರೆಗೆ ರಾಹುಲ್‍ ಗಾಂಧಿ ಅವರು ಎಎಪಿಯೊಂದಿಗೆ ಕೈಜೋಡಿಸುವ ಕುರಿತು ಸದಸ್ಯರ ಅಭಿಪ್ರಾಯ ಕೇಳಿದ್ದರು. ಈಗಾಗಲೇ ಎರಡೂ ಪಕ್ಷಗಳ ಸದಸ್ಯರು ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಎಎಪಿ ಈಗಾಗಲೇ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಎಎಪಿ ಸಂಚಾಲಕ ಅರವಿಂದ ಕೇಜ್ರೀವಾಲ್‍ ಮಾತ್ರ ಮಹಾಮೈತ್ರಿಯ ಭಾಗವಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
SCROLL FOR NEXT