ಜನರಲ್ ವಿಕೆ ಸಿಂಗ್ ಹಾಗೂ ದಿಗ್ವಿಜಯ್ ಸಿಂಗ್
ನವದೆಹಲಿ: ಪುಲ್ವಾಮ ಉಗ್ರ ದಾಳಿ ಉಗ್ರ ದಾಳಿಯೋ, ಪೂರ್ವ ಯೋಜಿತ ಅಪಘಾತವೋ ಎಂದು ಪ್ರಶ್ನಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ಅವರು, ರಾಜೀವ್ ಗಾಂಧಿ ಅವರದ್ದು ಹತ್ಯೆಯೋ, ಅಪಘಾತವೋ ಮರು ಪ್ರಶ್ನೆ ಹಾಕಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸುವ ಪ್ರಶ್ನೆಗಳನ್ನು ಕೇಳಿದರೆ ನೋವಾಗುತ್ತದೆ. ಪುಲ್ವಾಮ ಉಗ್ರ ದಾಳಿಯನ್ನು ಅಪಘಾತ ಎಂದು ಶಂಕಿಸುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರಿಗೂ ನಾನು ಒಂದು ಪ್ರಶ್ನೆ ಕೇಳುತ್ತೇನೆ.. ರಾಜೀವ್ ಗಾಂಧಿ ಅವರ ಮೇಲೆ ನನಗೂ ಗೌರವವಿದೆ. ಈಗ ಹೇಳಿ ದಿಗ್ವಿಜಯ್ ಸಿಂಗ್ ಅವರೇ ರಾಜೀವ್ ಗಾಂಧಿ ಅವರ ಹತ್ಯೆ ಅಪಘಾತವೋ ಅಥವಾ ಉಗ್ರರ ಕೃತ್ಯವೋ ಎಂದು ಪ್ರಶ್ನೆ ಮಾಡಿದರು.
ಅಂತೆಯೇ ವಾಯುದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಲಾಕೋಟ್ ಉಗ್ರ ಕ್ಯಾಂಪ್ ನಲ್ಲಿ 250ಕ್ಕೂ ಅಧಿಕ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಎಲ್ಲ ಮೂಲಗಳಿಂದಲೂ ಈ ಮಾಹಿತಿಯನ್ನು ಖಚಿತ ಪಡಿಸಿಕೊಂಡ ಬಳಿಕವೇ ತುಂಬಾ ಸೂಕ್ಷ್ಮವಾಗಿ ದಾಳಿ ಮಾಡಬೇಕಾದ ಅಂತಿಮ ಗುರಿಗಳನ್ನು ನಿಗದಿ ಮಾಡಲಾಯಿತು. ಈ ವೇಳೆ ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ತೊಂದರೆಯಾಗದಂತೆಯೂ ಎಚ್ಚರ ವಹಿಸಲಾಗಿತ್ತು ಎಂದು ವಿಕೆ ಸಿಂಗ್ ಹೇಳಿದ್ದಾರೆ.
ಇನ್ನು ಈ ಹಿಂದೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು, 'ಭಾರತೀಯ ವಾಯು ಪಡೆ ಪಾಕಿಸ್ಥಾನದೊಳಗಿನ ಉಗ್ರ ಶಿಬಿರಗಳ ಮೇಲೆ ನಡೆಸಿರುವ ಬಾಂಬ್ ದಾಳಿಯನ್ನು ವಿದೇಶಿ ಮಾಧ್ಯಮಗಳು ಸುಳ್ಳೆಂದು ವರದಿ ಮಾಡಿವೆ. ಆದುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ನಡೆಸಿರುವ ವಾಯು ದಾಳಿಗಳು ನಿಜವೇ ಸುಳ್ಳೇ; ನಿಜವೆಂದಾದರೆ ದಾಳಿಯಲ್ಲಿ ಸತ್ತಿರುವ ಉಗ್ರರ ಸಂಖ್ಯೆ ನಿಖರವಾಗಿ ಎಷ್ಟು ಎಂಬುದನ್ನು ತಿಳಿಸಬೇಕು' ಎಂದು ಹೇಳಿದ್ದರು.
'ಭಾರತೀಯ ವಾಯು ಪಡೆ ದಾಳಿಯಲ್ಲಿ ಮೃತಪಟ್ಟಿರುವರೆನ್ನಲಾದ ಉಗ್ರರ ಸಂಖ್ಯೆಯನ್ನು ಒಬ್ಬೊಬ್ಬ ಬಿಜೆಪಿ ನಾಯಕರು ಒಂದೊಂದು ರೀತಿಯಾಗಿ ನೀಡುತ್ತಿದ್ದಾರೆ. ದಾಳಿ ನಡೆದ ದಿನ ಮೃತ ಉಗ್ರರ ಸಂಖ್ಯೆ 350 ಎಂದು ಹೇಳಲಾಗಿತ್ತು. ಅನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೃತ ಉಗ್ರರ ಸಂಖ್ಯೆ 250 ಎಂದು ಹೇಳಿದರು. ಹಾಗಿರುವಾಗ ಮೃತ ಉಗ್ರರ ಸಂಖ್ಯೆ ನಿಖರವಾಗಿ ಎಷ್ಟು ಎನ್ನುವ ಬಗ್ಗೆ ಗೊಂದಲವಿದೆ. ಆದುದರಿಂದ ಪ್ರಧಾನಿ ಮೋದಿ ಈ ಗೊಂದಲವನ್ನು ನಿವಾರಿಸಿ ನಿಖರ ಅಂಕೆ-ಸಂಖ್ಯೆಯನ್ನು ನೀಡಬೇಕು' ಎಂದು ದಿಗ್ವಿಜಯ್ ಸಿಂಗ್ ಹೇಳಿದರು.
'ಅಮಿತ್ ಶಾ ಅವರಿಗಿಂತ ಮೊದಲು ಹಿರಿಯ ಬಿಜೆಪಿ ನಾಯಕ ಎಸ್ ಎಸ್ ಅಹ್ಲುವಾಲಿಯಾ ಅವರು ಐಎಎಫ್ ದಾಳಿಯಲ್ಲಿ ಯಾವನೇ ಉಗ್ರ ಸತ್ತಿಲ್ಲ ಎಂದು ಕೂಡ ಹೇಳಿದ್ದರು. ಈಗ ವಿದೇಶೀ ಮಾಧ್ಯಮಗಳು ಐಎಎಫ್ ನಿಂದ ವಾಯು ದಾಳಿಯೇ ನಡೆದಿಲ್ಲ ಎಂದು ವರದಿ ಮಾಡುತ್ತಿವೆ' ಎಂದು ದಿಗ್ವಿಜಯ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos