ದೇಶ

ನೀರವ್ ಮೋದಿಯ 100 ಕೋಟಿ ಮೌಲ್ಯದ ಐಶಾರಾಮಿ ಬಂಗಲೆ, ಸ್ಫೋಟಕಗಳ ಮೂಲಕ ಧ್ವಂಸ!

Srinivasamurthy VN
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಸೇರಿದ ಬಹುಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಸ್ಫೋಟಕಗಳನ್ನಿಟ್ಟು ಇಂದು ಧ್ವಂಸ ಮಾಡಲಾಗಿದೆ.
ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ ಸುಮಾರು 100 ಕೋ.ರೂ ಗೂ ಅಧಿಕ ವೌಲ್ಯದ ಸಮುದ್ರಕ್ಕೆ ಮುಖ ಮಾಡಿರುವ ಬೃಹತ್ ಬಂಗಲೆಯನ್ನು ಅಧಿಕಾರಿಗಳು ಸ್ಪೋಟಕ ಇಟ್ಟು ಧ್ವಂಸಗೊಳಿಸಿದ್ದಾರೆ. 
ಭಾರತದ ಬ್ಯಾಂಕ್‌ ಗಳಲ್ಲಿ ಸಾಲ ಮರು ಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿರುವ ಕೋಟ್ಯಧಿಪತಿ ನೀರವ್ ಮೋದಿ ಕರಾವಳಿ ನಿಯಂತ್ರಣ ವಲಯ ನಿಯಮಗಳು ಹಾಗೂ ಮಹಾರಾಷ್ಟ್ರದ ರಾಜ್ಯದ ನಿಯಮಾವಳಿಗಳನ್ನು ಉಲ್ಲಂಘಿಸಿ 33,000 ಚದರ ಅಡಿ ಐಷಾರಾಮಿ ಬಂಗಲೆಯನ್ನು ಅನಧಿಕೃತವಾಗಿ ಕಟ್ಟಿದ್ದರು. ಈ ಕಾರಣಕ್ಕಾಗಿ 2009ರಲ್ಲಿ ಶಂಭುರಾಜೆ ಯುವ ಕ್ರಾಂತಿ ಸಂಸ್ಥೆಯೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ನೀರವ್ ಮೋದಿ ನಿರ್ಮಿಸಿದ್ದ ಅನಧಿಕೃತ ಬಂಗಲೆಯನ್ನು ಕೆಡವು ಹಾಕಲು ಆದೇಶಿಸಿತ್ತು.
ಇದೀಗ ಈ ಬೃಹತ್ ಐಶಾರಾಮಿ ಬಂಗಲೆಯನ್ನು ಅಧಿಕಾರಿಗಳು ಸಂಪೂರ್ಣವಾಗಿ ಕೆಡವಿ ಹಾಕಿದ್ದಾರೆ. ಸಾಕಷ್ಟು ದಿನಗಳಿಂದಲೇ ಈ ಬಂಗಲೆಯನ್ನು ಕೆಡವಿ ಹಾಕುವ ಕಾರ್ಯ ನಡೆದಿತ್ತಾದರೂ, ಬಂಗಲೆಯ ಅಡಿಪಾಯ ಗಟ್ಟಿಮುಟ್ಟಾಗಿದ್ದರಿಂದ ಬಂಗಲೆಯನ್ನು ಒಡೆದುಹಾಕಲು ಅಧಿಕಾರಿಗಳು ಬೃಹತ್ ಯಂತ್ರಗಳನ್ನು ಬಳಸಿ ಕಟ್ಟಡವನ್ನು ಕೆಡವಿದ್ದಾರೆ. ಈ ಬೃಹತ್ ಬಂಗಲೆಯನ್ನು ಕೆಡವಲು ಒಂದು ತಿಂಗಳು ಸಮಯ ಹಿಡಿದಿದೆ. ಕಟ್ಟಡ ಧ್ವಂಸ ಕೆಲಸ ಚುರುಕುಗೊಳಿಸಲು ಇಂದು ಅಧಿಕಾರಿಗಳು ಡೈನಾಮೈಟ್‌ ಗಳಂತಹ ನಿಯಂತ್ರಿತ ಸ್ಫೋಟಕವನ್ನು ಬಳಸಿ ಇದೀಗ ಸಂಪೂರ್ಣ ಬಂಗಲೆಯನ್ನು ಕೆಡವಿ ಹಾಕಿದ್ದಾರೆ.
SCROLL FOR NEXT