ದೇಶ

ಮೋದಿ ನಾಡಲ್ಲಿ ಕೈ ನಾಯಕರ ಬೀಡು; ಗಾಂಧಿ ಆಶ್ರಮದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆರಂಭ

Srinivasamurthy VN
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ನಿಂದಲೇ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯ ಆರಂಭಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಕೈನಾಯಕರು ಮುಂದಾಗಿದ್ದು, ಗುಜರಾತ್ ನ ಸಾಬರಮತಿ ಅಶ್ರಮದಲ್ಲಿ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿದೆ.
ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಮುಖಂಡರಾದ ಎ.ಕೆ.ಆಂಟನಿ, ಗುಲಾಮ್‌ ನಬಿ ಆಜಾದ್‌, ಅಹ್ಮದ್‌ ಪಟೇಲ್‌, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೊಟ್‌, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌, ಪುದುಚೆರಿ ಸಿಎಂ ವಿ.ನಾರಾಯಣಸಾಮಿ, ತರುಣ್‌ ಗೊಗೊಯಿ, ಹರೀಶ್ ರಾವತ್‌ ಸೇರಿದಂತೆ ಹಲವು ಮುಖಂಡರು ಸಾಬರಮತಿ ಆಶ್ರಮದ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾದರು. 
ಇನ್ನು ಇತ್ತೀಚೆಗಷ್ಟೇ ಪಕ್ಷದ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಿಯಾಂಕಾ ವಾದ್ರಾ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಇಂದು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಿಯಾಂಕಾ ವಾದ್ರಾ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ.  ಕಾರ್ಯಕಾರಿ ಸಮಿತಿ ಸಭೆ ಬಳಿಕ ಗಾಂಧಿನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಿಯಾಂಕಾ ವಾದ್ರಾ ಭಾಷಣ ಮಾಡಲಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, 1930ರ ಮಾರ್ಚ್‌ 12ರಂದು ಮಹಾತ್ಮ ಗಾಂಧಿ ಸಾಬರಮತಿ ಆಶ್ರಮದಿಂದ ಸತ್ಯಾಗ್ರಹಿಗಳೊಂದಿಗೆ ದಂಡಿ ಯಾತ್ರೆ(ಉಪ್ಪಿನ ಸತ್ಯಾಗ್ರಹ) ಪ್ರಾರಂಭಿಸಿದ್ದರು. ಬ್ರಿಟಿಷರು ಉಪ್ಪಿನ ಮೇಲೆ ಹೇರಿದ್ದ ಹಲವು ನಿರ್ಬಂಧ, ನೀತಿಗಳ ವಿರುದ್ಧ ಗಾಂಧೀಜಿ ಶಾಂತಿಯುತ ಹೋರಾಟ ನಡೆಸಿದ್ದರು. ಈ ಬಗ್ಗೆ ಕಾಂಗ್ರೆಸ್ ಟ್ವೀಟ್‌ ಮಾಡಿದೆ. 
SCROLL FOR NEXT