ದೇಶ

ವಾಧ್ರ ತನಿಖೆ ಸ್ವಾಗತಾರ್ಹ, ರಾಫೆಲ್ ಒಪ್ಪಂದದಲ್ಲಿ ಪ್ರಧಾನಿಯನ್ನೂ ತನಿಖೆ ಮಾಡಿ: ರಾಹುಲ್ ಗಾಂಧಿ

Srinivas Rao BV
ಚೆನ್ನೈ: 2019 ರ ಲೋಕಸಭಾ ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿರುವ ರಾಹುಲ್ ಗಾಂಧಿ, ಕಾನೂನು ವಾಧ್ರ ಹಾಗೂ ಪ್ರಧಾನಿ ಮೋದಿ ಇಬ್ಬರಿಗೂ ಸಮವಾಗಿ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. 
ಚೆನ್ನೈ ನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ನಕಾರಾತ್ಮಕ, ಭಯದ ವಾತಾವರಣ ಇದ್ದಾಗ ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ. ಆರ್ಥಿಕ ಬೆಳವಣಿಗೆ ಮೇಲೆ ದೇಶದ ಮೂಡ್ ನೇರವಾಗಿ ಪರಿಣಾಮ ಬೀರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಕಾಂಗ್ರೆಸ್ ದೇಶದ ಮೂಡ್ ನ್ನು ಬದಲಾವಣೆ ಮಾಡಲಿದ್ದು ಜನರನ್ನು ಸಂತೋಷಗೊಳಿಸಲಿದೆ, ಸಬಲೀಕರಣ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಇದೇ ವೇಳೆ ತಮ್ಮ ಭಾವ ರಾಬರ್ಟ್ ವಾಧ್ರ ಅವರ ಕುರಿತಾಗಿ ವಿದ್ಯಾರ್ಥಿಗಳಿಂದ ಎದುರಾದ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಅದು ಕೆಲವರಿಗಷ್ಟೇ ಅನ್ವಯವಾಗುವುದಿಲ್ಲ.  ರಾಬರ್ಟ್ ವಾಧ್ರ ಅವರನ್ನು ತನಿಖೆಗೊಳಪಡಿಸುವುದು ಸ್ವಾಗತಾರ್ಹ ಹಾಗೆಯೇ ರಾಫೆಲ್ ಪ್ರಕರಣದಲ್ಲಿ ಒಪ್ಪಂದವನ್ನು ನೇರವಾಗಿ ನಿರ್ವಹಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ತನಿಖೆಗೆ ಒಳಪಡಿಸಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. 
ಇದೇ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
SCROLL FOR NEXT