ದೇಶ

ಮನೋಹರ್ ಪರಿಕ್ಕರ್ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ

Srinivas Rao BV
ನವದೆಹಲಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೊದಲು ಮನೋಹರ್ ಪರಿಕ್ಕರ್ ಅವರ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. 
ಅನಾರೋಗ್ಯದ ನಡುವೆಯೂ ಮನೋಹರ್ ಪರಿಕ್ಕರ್ ಅವರು ದೃಢತೆಯನ್ನು ಕಾಯ್ದುಕೊಂಡಿದ್ದರು. ಮನೋಹರ್ ಪರಿಕ್ಕರ್ ಸಾರ್ವಜನಿಕ ಜೀವನದಲ್ಲಿ ಬದ್ಧತೆ ಹಾಗೂ ಸಮರ್ಪಣಾ ಮನೋಭಾವನೆಗೆ ಸಾಕಾರವಾಗಿದ್ದರು. ಗೋವಾ ಹಾಗೂ ದೇಶದ ಜನತೆಗೆ ಅವರು ಮಾಡಿರುವ ಸೇನೆ ಎಂದಿಗೂ ಮರೆಯಲಾಗುವುದಿಲ್ಲ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ. 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹ ಮನೋಹರ್ ಪರಿಕ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಪರಿಕ್ಕರ್ ಓರ್ವ ಸಾಟಿಯಿಲ್ಲದ ನಾಯಕ ನಿಜವಾದ ದೇಶಭಕ್ತ ಮತ್ತು ಅಸಾಧಾರಣ ಆಡಳಿತಗಾರ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೇಶಕ್ಕೆ ಅವರು ಸಲ್ಲಿಸಿದ ಕಳಂಕರಹಿತ ಸೇವೆ ಮುಂದಿನ ಪೀಳಿಗೆಗೆ ನೆನಪಿನಲ್ಲುಳಿಯಲಿದೆ, ಅವರ ನಿಧನದಿಂದ ತೀವ್ರ ಬೇಸರವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
2018 ರ ಫ್ರೆಬ್ರವರಿಯಲ್ಲಿ ಮನೋಹರ್ ಪರಿಕ್ಕರ್ ಅವರಿಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಇರುವುದು ದೃಢವಾಗಿತ್ತು. ಕ್ಯಾನ್ಸರ್ ನ ಹೊರತಾಗಿಯೂ ಸಹ ಗೋವಾ ಮುಖ್ಯಮಂತ್ರಿ ಹುದ್ದೆಯನ್ನು ಮನೋಹರ್ ಪರಿಕ್ಕರ್ ಸಮರ್ಥವಾಗಿ ನಿಭಾಯಿಸಿ ಬಜೆಟ್ ಮಂಡಿಸಿದ್ದರು. ಕೊನೆ ಉಸಿರಿರುವವರೆಗೂ ಗೋವಾ ಜನತೆ ಸೇವೆ ಮಾಡುವುದಾಗಿ ಹೇಳಿದ್ದರು. 
ಆರ್ ಎಸ್ಎಸ್ ನ ಹಿನ್ನೆಲೆ ಹೊಂದಿದ್ದ ಮನೋಹರ್ ಪರಿಕ್ಕರ್ ಐಐಟಿಯಿಂದ ಮೆಟಲರ್ಜಿ ವಿಷಯದಲ್ಲಿ ಪದವಿ ಪಡೆದಿದ್ದರು.  ಅಕ್ಟೋಬರ್ 24, 2000 ರಲ್ಲಿ ಪ್ರಥಮ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಅಧಿಕಾರ ವಹಿಸಿಕೊಂಡಿದ್ದರು. ಅವಧಿ ಪೂರ್ಣಗೊಂಡ ನಂತರ 2002 ರ ಜೂ.5 ರಂದು ಮತ್ತೊಮ್ಮೆ ಗೋವಾ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾದರು 2017 ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಅವರು ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
SCROLL FOR NEXT