ದೇಶ

ಪುಣ್ಯ ಸ್ಮರಣೆ: ಟಿಪ್ಪು ಸುಲ್ತಾನ್ ಶೌರ್ಯವನ್ನು ಶ್ಲಾಘಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Srinivasamurthy VN
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ದೊರೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ರನ್ನು ಹಾಡಿ ಹೊಗಳಿದ್ದಾರೆ.
ಮೇ 4ರಂದು ಟಿಪ್ಪು ಸುಲ್ತಾನ್ ರ ಪುಣ್ಯತಿಥಿಯಾಗಿದ್ದು, ಈ ಕುರಿತಂತೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಇಂದು ಮೇ 4. ಟಿಪ್ಪು ಸುಲ್ತಾನ್ ರ ಪುಣ್ಯತಿಥಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯಕ್ಕಾಗಿಯೇ ಪ್ರಾಣ ಬಿಟ್ಟ ವೀರ ಯೋಧ. ಗುಲಾಮಗಿರಿಯಲ್ಲಿ ಬದುಕುವುದಕ್ಕಿಂತ ಸ್ವತಂತ್ರವಾಗಿ ತಲೆ ಎತ್ತಿ ಬದುಕಬೇಕು ಎಂಬ ಮಹತ್ ಸಂದೇಶ ಸಾರಿದಾತ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಟಿಪ್ಪು ಕುರಿತಂತೆ ಇಮ್ರಾನ್ ಹೇಳಿಕೆ ಇದೇ ಮೊದಲೇನಲ್ಲ... ಈ ಹಿಂದೆಯೂ ಕೂಡ ಇಮ್ರಾನ್ ಖಾನ್ ಪಾಕಿಸ್ತಾನ ಸಂಸತ್ ನಲ್ಲಿ ಟಿಪ್ಪು ಕುರಿತು ಉಲ್ಲೇಖ ಮಾಡಿದ್ದರು. 'ಪಾಕಿಸ್ತಾನವು ಯುದ್ಧ ಸನ್ನಿವೇಶವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನವನ್ನು ಪಾಕಿಸ್ತಾನದ ದೌರ್ಬಲ್ಯ ಎಂದು ಭಾವಿಸಬಾರದು. ಇತಿಹಾಸವನ್ನು ನೋಡಿದರೆ ನಮಗೆ ಇಬ್ಬರು ಬಾದ್‌ ಶಾಗಳು ಕಾಣುತ್ತಾರೆ. ಒಂದು ಕಡೆ ಬಹದ್ದೂರ್‌ ಷಾ ಜಫರ್‌ (ಕೊನೆಯ ಮೊಘಲ್ ದೊರೆ) ಮತ್ತು ಇನ್ನೊಂದು ಕಡೆ ಟಿಪ್ಪುಸುಲ್ತಾನ್‌. ಯುದ್ಧ ಅಥವಾ ಗುಲಾಮಿತನದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ಬಹದ್ದೂರ್‌ ಷಾ ಜಫರ್‌ ಗುಲಾಮಿತನವನ್ನು ಆಯ್ದುಕೊಂಡರು. ಉಳಿದ ಜೀವನವನ್ನು ಗುಲಾಮನಾಗಿಯೇ ಕಳೆದರು. ಟಿಪ್ಪುಸುಲ್ತಾನ್‌ ಗೂ ಕೂಡಾ ಇಂತಹದ್ದೊಂದು ಆಯ್ಕೆಯ ತೀರ್ಮಾನ ಕೈಗೊಳ್ಳಬೇಕಾದ ಸಮಯ ಬಂದಿತ್ತು. ಗುಲಾಮನಾಗಿ ಬದುಕು ಸವೆಸುವ ಅಥವಾ ಸ್ವತಂತ್ರನಾಗಿ, ಕೊನೆಯುಸಿರು ಇರುವ ತನಕ ಹೋರಾಡುವುದು ಇದರಲ್ಲಿ ಒಂದು ತೀರ್ಮಾನವನ್ನು ಟಿಪ್ಪುಸುಲ್ತಾನ್‌ ಕೈಗೊಳ್ಳಬೇಕಿತ್ತು. ಈ ವೇಳೆ ಯುದ್ಧ ಮಾಡಿದ ಟಿಪ್ಪುಸುಲ್ತಾನ್‌ ಈ ನೆಲದ ಹೀರೋ’ ಎಂದು ಇಮ್ರಾನ್‌ ಖಾನ್‌ ಹೇಳಿದ್ದರು.
SCROLL FOR NEXT