ದೇಶ

ರಾಜೀವ್ ಕುಟುಂಬ ಐಎನ್‌ಎಸ್ ವಿರಾಟ್ ದುರ್ಬಳಕೆ ಮಾಡಿಕೊಂಡಿಲ್ಲ, ಪ್ರಧಾನಿ ಮೋದಿ ಹೇಳಿಕೆ ತಪ್ಪು: ನೌಕಾಪಡೆ ಮಾಜಿ ಮುಖ್ಯಸ್ಥ

Lingaraj Badiger
ನವದೆಹಲಿ: ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಯುದ್ದನೌಕೆ ಐಎನ್ ಎಸ್ ವಿರಾಟ್ ಅನ್ನು ತಮ್ಮ ರಜಾ ದಿನಗಳನ್ನು ಕಳೆಯಲು ಪರ್ಸನಲ್ ಟ್ಯಾಕ್ಸಿಯಂತೆ ಬಳಸಿಕೊಳ್ಳುತ್ತಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್ ರಾಮದಾಸ್ ಅವರು, ಪ್ರಧಾನಿ ಹೇಳಿಕೆ ತಪ್ಪು ಎಂದಿದ್ದಾರೆ.
ಸಾಗರ ಗಡಿಯ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ರಾಜೀವ್ ಗಾಂಧಿ ಅವರ ಕುಟುಂಬ ರಜೆಯ ಮೋಜು ಅನುಭವಿಸಲು ಲಕ್ಷದ್ವೀಪಕ್ಕೆ ತೆರಳಲು 'ಕುಟುಂಬದ ಖಾಸಗಿ ಟ್ಯಾಕ್ಸಿ'ಯಂತೆ ಬಳಸಲಾಗಿತ್ತು. ಹತ್ತು ದಿನ ಈ ನೌಕೆ ಅಲ್ಲಿಯೇ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದರು.
ಈ ಕುರಿತು ಪ್ರಕಟಣೆ ನೀಡಿರುವ, ಯುದ್ಧನೌಕೆ ಐಎನ್‌ಎಸ್ ವಿರಾಟ್ ಮಾಜಿ ಕಮಾಂಡಿಂಗ್ ಆಫೀಸರ್ ರಾಮದಾಸ್ ಅವರು, ಯುದ್ಧ ನೌಕೆಯನ್ನು ದುರ್ಬಳಕೆ ಮಾಡಿಕೊಂಡಿರಲಿಲ್ಲ. 32 ವರ್ಷಗಳ ಹಿಂದೆ ರಾಜೀವ್ ಗಾಂಧಿ ಮತ್ತು ಅವರ ಪತ್ನಿ ಸೋನಿಯಾ ಗಾಂಧಿ ಐಎನ್‌ಎಸ್ ವಿರಾಟ್‌ನಲ್ಲಿ ಏರಿದ್ದು ನಿಜ. ಆದರೆ ಅದು ರಜೆಯ ಮೋಜಿಗಾಗಿ ಅಲ್ಲ. ಅವರು ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ಸಭೆಗಾಗಿ, ಅಧಿಕೃತ ಕೆಲಸದ ನಿಮಿತ್ತ ಹೊರಟಿದ್ದರು. ಬಂಗಾರಾಮ್ ದ್ವೀಪದಲ್ಲಿ ಸಭೆ ನಡೆಸಲು ರಾಜೀವ್ ಹೊರಟಿದ್ದರು. ಕಚೇರಿ ಕೆಲಸಗಳಿಗೆ ತೆರಳುವಾಗ ಪತ್ನಿಯೊಂದಿಗೆ ಪ್ರಯಾಣಿಸಲು ಪ್ರಧಾನಿಗೆ ಅಧಿಕಾರವಿರುತ್ತದೆ. ಆದರೆ, ಅವರು ಅಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು. ಅವರ ಸುರಕ್ಷತೆಗಾಗಿ ನೌಕಾಪಡೆಯ ಕೆಲವು ಸಿಬ್ಬಂದಿ ದ್ವೀಪಕ್ಕೆ ಮೊದಲೇ ತೆರಳಿದ್ದರು ಎಂದು ಹೇಳಿದ್ದಾರೆ.
ಇನ್ನು ಈ ಅವಧಿಯಲ್ಲಿ ಐಎನ್‌ಎಸ್ ವಿರಾಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪಸ್ರಿಚಾ ಅವರು ಸಹ ರಾಜೀವ್ ಕುಟುಂಬವು ದ್ವೀಪಕ್ಕೆ ತೆರಳಲು ನೌಕೆಯನ್ನು ಬಳಸಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.
SCROLL FOR NEXT