ದೇಶ

ಕ್ರೂರಿಗಳು; ಕರಡಿ ಮರಿಯ ಮೇಲೂ ಕಲ್ಲು ತೂರಾಟ, ನದಿಗೆ ಬಿದ್ದ ಮೂಕ ಪ್ರಾಣಿ!

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಸಾಮಾನ್ಯ, ಆದರೆ ಕೆಲ ವಿಕೃತ ಮನುಷ್ಯರು ಕರಡಿ ಮರಿಯ ಮೇಲೂ ಕಲ್ಲು ತೂರಾಟ ಮಾಡಿ ಈ ಮೂಕ ಪ್ರಾಣಿ ನದಿಗೆ ಬೀಳುವಂತೆ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ಕಾರ್ಗಿಲ್​ ಬಳಿ ಜನರು ಕರಡಿಯೊಂದರ ಮೇಲೆ ಕಲ್ಲು ತೂರಾಟ ನಡೆಸಿ, ಅದು ಬೆಟ್ಟದಿಂದ ಜಾರಿ ಕೆಳಗೆ ನೀರಿನಲ್ಲಿ ಬೀಳುವಂತೆ ಮಾಡಿ ಅಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಣಿವೆ ರಾಜ್ಯದ ನೀಚ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
ಕಂದು ಬಣ್ಣದ ಕರಡಿ ಮರಿ ಹತ್ತಿರದ ಗ್ರಾಮವೊಂದರಲ್ಲಿ ಕಾಣಿಸಿಕೊಂಡಾಗ, ಜನರು ಅಟ್ಟಿಸಿಕೊಂಡು ಬಂದಿದ್ದಾರೆ. ಈ ವೇಳೆ ಕರಡಿ ಕಡಿದಾದ ಬೆಟ್ಟವೊಂದರ ಮೇಲೆ ಹೋಗಿದೆ. ಕರಡಿ ಮೇಲೆ ಜನ ಕಲ್ಲು ತೂರಿದ್ದರಿಂದ ಅದು ನಿಯಂತ್ರಣ ತಪ್ಪಿ ಬಂಡೆಯಿಂದ ಜಾರಿ ಕೆಳಗೆ ನೀರಿನಲ್ಲಿ ಬಿದ್ದಿದೆ. ಈ ಮನಕಲಕುವ ದೃಶ್ಯವನ್ನ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಘಟನೆಗೆ ಕಾರಣರಾದ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ವ್ಯಾಪಕ ಖಂಡನೆ
ಕಾಶ್ಮೀರ ಪ್ರವಾಸೋದ್ಯಮದ ಮಾಜಿ ನಿರ್ದೇಶಕ ಮೆಹಮೂದ್​ ಶಾ ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ಹಾಗೂ ಹೃದಯ ಹಿಂಡುವ ದೃಶ್ಯ. ಮೊದಲು ಅವುಗಳ ವಾಸಸ್ಥಾನವನ್ನು ಆಕ್ರಮಿಸೋದಾದರೂ ಏಕೆ? ಎಂದು ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.
ಕರಡಿ ಮರಿ ಪತ್ತೆ ಶೋಧ ಕಾರ್ಯ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ಕರಡಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆಯೇ ಕರಡಿ ಮೇಲೆ ದಾಳಿ ನಡೆಸಿದವರ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕರಡಿ ಪತ್ತೆಗೆ ಅರಣ್ಯ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಸಿಬ್ಬಂದಿಯುಳ್ಳ ತಂಡಗಳನ್ನ ರಚಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
SCROLL FOR NEXT