ದೇಶ

ಆವಿಷ್ಕಾರಕ್ಕೂ ಮುನ್ನವೇ ಮೋದಿ ಡಿಜಿಕ್ಯಾಮ್, ಇ-ಮೇಲ್ ಬಳಸಿದರೆ?: ಪ್ರಧಾನಿಗೆ ಟ್ವೀಟಾರತಿ

Lingaraj Badiger
ಬೆಂಗಳೂರು: ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ನ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ವೇಳೆ ಮೋಡ ಕವಿದ ವಾತಾವರಣವಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಹಾಸ್ಯಾಸ್ಪದ ಚರ್ಚೆಯನ್ನು ಹುಟ್ಟುಹಾಕಿದೆ. ಇದೀಗ ಟ್ವೀಟಿಗರು ಪ್ರಧಾನಿ ಮೋದಿ ಆವಿಷ್ಕಾರಕ್ಕೂ ಮುನ್ನವೇ ಡಿಜಿಟಲ್ ಕ್ಯಾಮೆರಾ ಮತ್ತು ಇ-ಮೇಲ್ ಬಳಸಿದ್ದರೇ? ಎಂದು ಟ್ರೋಲ್ ಮಾಡುವ ಮೂಲಕ ಕೇಸರಿ ಪಡೆಗೆ ತೀವ್ರ ಮುಜುಗರ ಉಂಟು ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ನ್ಯೂಸ್ ನೇಷನ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್ ಗಳು ನಮ್ಮ ಯುದ್ಧ ವಿಮಾನಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ ಎಂದು ಹೇಳಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್ ಆಗಿದೆ.
ಇದೀಗ ಟ್ವೀಟಿಗರು ಪ್ರಧಾನಿ ಮೋದಿ ಅದೇ ಸಂದರ್ಶನದಲ್ಲಿ ತಾವು ಹೇಳಿದ ಡಿಜಿಟಲ್ ಕ್ಯಾಮೆರಾ ಮತ್ತು ಇ-ಮೇಲ್ ಬಳಕೆ ಬಗ್ಗೆ ಟ್ರೋಲ್ ಮಾಡಿದ್ದಾರೆ.
1988ರರಲ್ಲಿ ನಾನು ಡಿಜಿಟಲ್ ಕ್ಯಾಮೆರಾ ಬಳಸಿದ್ದೆ. ಭಾರತದಲ್ಲಿ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲಿ ನಾನು ಒಬ್ಬ. ಆ ಕ್ಯಾಮೆರಾದಿಂದ ನಾನು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ಫೋಟೋ ಕ್ಲಿಕ್ಕಿಸಿದ್ದೆ. ಅಲ್ಲದೆ 1988ರಲ್ಲೇ ನಾನು ಇ-ಮೇಲ್ ಸಹ ಬಳಸುತ್ತಿದ್ದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ. 
ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಹಲವು ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಹಲವು ನೆಟ್ಟಿಗರು ಟ್ವೀಟಾರತಿ ಮಾಡಿದ್ದು, ಖ್ಯಾತ ಆರ್ಥಿಕ ತಜ್ಞೆ ರೂಪಾ ಸುಬ್ರಮಣ್ಯ ಅವರು, ಪಾಶ್ಚಿಮಾತ್ಯ ದೇಶಗಳಲ್ಲಿ(ಅಮೆರಿಕ, ಕೆನಡಾ) ಆ ಕಾಲಕ್ಕೆ ಕೆಲವರಿಗೆ ಮಾತ್ರ ಇಮೇಲ್ ಲಭ್ಯವಾಗುತ್ತಿತ್ತು. ಇ-ಮೇಲ್ ಭಾರತಕ್ಕೆ ಅಧಿಕೃತವಾಗಿ ಪರಿಚಯಿಸಲ್ಪಟ್ಟಿದ್ದೇ 1995ರಲ್ಲಿ. ಆದರೆ ಮೋದಿಯವರು 1988ರಲ್ಲಿಯೇ ಇಮೇಲ್ ಬಳಸಿದ್ದರು. ಮೋದಿ ನೀವು ಸಾಮಾನ್ಯ ವ್ಯಕ್ತಿಯಲ್ಲ! ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರ ಈ ಹೇಳಿಕೆ ಭಾರತಕ್ಕೆ ಮುಜುಗರ ಉಂಟು ಮಾಡಿದೆ ಎಂದು ರಾಜಕೀಯ ವಿಮರ್ಷಕ ಸಲ್ಮಾನ್ ಸೋಜ್ ಅವರು ಟ್ವೀಟ್ ಮಾಡಿದ್ದಾರೆ.
ಡಿಜಿಟಲ್ ಕ್ಯಾಮೆರಾ 1990ರಲ್ಲಿ ಮಾರುಕಟ್ಟೆಗೆ ಬಂತು. ಆದರೆ ಮೋದಿ 1987-88ರಲ್ಲಿಯೇ ಡಿಜಿಟಲ್ ಕ್ಯಾಮೆರಾ ಹೊಂದಿದ್ದರು. ಇ-ಮೇಲ್ ಖಾತೆ ಹೊಂದಿದ್ದರು. 1988ರಲ್ಲಿಯೇ ಅವರು ಕಲರ್ ಫೋಟೋ ಲಗತ್ತಿಸಿ ಇ-ಮೇಲ್ ಮಾಡಿದ್ದರು. ಮೋದಿ ಯಾವುದೋ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸರಿಯಾದ ಚಿಕಿತ್ಸೆಯ ಅಗತ್ಯವಿದೆ ಎಂದು ಅಶೋಕ್ ಸ್ವೈನ್ ಎಂಬುವವರು ಟ್ವೀಟಿಸಿದ್ದಾರೆ.
SCROLL FOR NEXT