ದೇಶ

ಬಾಪು ಅವಮಾನಿಸಿದ ಪ್ರಗ್ಯಾ ಸಿಂಗ್ ರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ: ಪ್ರಧಾನಿ ಮೋದಿ

Lingaraj Badiger
ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಹೇಳಿಕೆಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬಾಪೂ ಅವಮಾನಿಸಿದ ಪ್ರಗ್ಯಾ ಸಿಂಗ್ ರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಮಧ್ಯ ಪ್ರದೇಶದ ಖಾರ್ಗೋನ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಗ್ಯಾ ಸಿಂಗ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಿರಬುಹುದು. ಆದರೆ ಬಾಪು ಅವರನ್ನು ಅವಮಾನ ಮಾಡಿದ ಅವರನ್ನು ನನ್ನಿಂದ ಕ್ಷಮಿಸಲು ಸಾಧ್ಯವಿಲ್ಲ ಎಂದರು.
ಮಹಾತ್ಮ ಗಾಂಧೀಜಿ ಈ ದೇಶದ ಹೆಮ್ಮೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬಾಪೂಜಿಯನ್ನು ಅವಮಾನಿಸುವ ಇಂತಹ ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ. ಈ ಕೃತ್ಯವೆಸಗಿದ ಸಾಧ್ವಿ ಪ್ರಗ್ಯಾ ಸಿಂಗ್​ರನ್ನು ಯಾವುದೇ ಕಾರಣಕ್ಕೂ ನಾನು ಕ್ಷಮಿಸುವುದಿಲ್ಲ ಎಂದು ಮೋದಿ ಗುಡುಗಿದ್ದಾರೆ.
ನಿನ್ನೆ ಭೋಪಾಲ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಗ್ಯಾ ಸಿಂಗ್ ಠಾಕೂರ್, ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಉಳಿಯುತ್ತಾರೆ ಎಂದು ಹೇಳಿದ್ದರು. ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿ, ಕ್ಷಮೆಯಾಚಿಸುವಂತೆ ಸೂಚಿಸಿದ ಬಳಿಕ ಕ್ಷಮೆಯಾಚಿಸಿದ್ದರು.
ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಹ ಗೋಡ್ಸೆಯನ್ನು ಹೊಗಳಿ ಟ್ವೀಟ್ ಮಾಡಿದ್ದರು. ಇದೀಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಮೂವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.
SCROLL FOR NEXT