ದೇಶ

ಪ್ರೇಯಸಿಯನ್ನು ವರಿಸಿದ ವಿವಾಹಿತ ಸಿಆರ್ ಪಿಎಫ್ ಯೋಧ, ಪತ್ನಿ ಜತೆಗೂ ಮತ್ತೆ ಮದುವೆ!

Lingaraj Badiger
ರಾಯ್ ಪುರ: ಸಿಆರ್ ಪಿಎಫ್ ಯೋಧನೊಬ್ಬ ಏಕಕಾಲಕ್ಕೆ ಪತ್ನಿ ಹಾಗೂ ಪ್ರೇಯಸಿಯನ್ನು ವರಿಸಿದ ಅಪರೂಪದ ಘಟನೆ ಛತ್ತೀಸ್ ಗಢದ ಜಾಷ್ಪುರ್ ಜಿಲ್ಲೆಯ ಬಗ್ದೋಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿಆರ್ ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿರುವ ಜಾಷ್ಪುರ್ ಮೂಲದ ಅನಿಲ್ ಪೈಕ್ರಾ ಅವರು ನಾಲ್ಕು ವರ್ಷಗಳ ಹಿಂದೆ ಪಕ್ಕದ ಗ್ರಾಮದ ಯುವತಿ ಜತೆ ಮದುವೆಯಾಗಿದ್ದರು. ನಂತರ ತಾನು ಪ್ರೀತಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಮದುವೆಯಾಗಿದ್ದಾರೆ. ಅಲ್ಲದೆ ಪ್ರೇಯಸಿ ಜತೆ ಪತ್ನಿಯನ್ನು ಮರು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸ್ಥಳೀಯರ ಪ್ರಕಾರ, ಮೊದಲ ಪತ್ನಿಗೆ ಮಕ್ಕಳಾಗದಿದ್ದರಿಂದ ಸಿಆರ್ ಪಿಎಫ್ ಯೋಧ ಅನಿಲ್ ಅವರು ತಾವು ಪ್ರೀತಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಮದುವೆಯಾಗಲು ನಿರ್ಧರಿಸಿದರು. ಇದಕ್ಕೆ ಪತ್ನಿ ಸಹ ಸಮ್ಮತಿ ನೀಡಿದ್ದರು. ಹೀಗಾಗಿ ಅನಿಲ್ ರಜೆ ಮೇಲೆ ಬಂದಾಗ ಅಂಗನವಾಡಿ ಕಾರ್ಯಕರ್ತೆಯ ಜತೆಯೇ ಹೆಚ್ಚು ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ. ಇದೀಗ ಸಂಪ್ರದಾಯದಂತೆ ಪ್ರೇಯಸಿ ಹಾಗೂ ಪತ್ನಿ ಜತೆ ಮದುವೆಯಾಗಿದ್ದಾರೆ ಎಂದು ಜಾಷ್ಪುರ್ ಮೂಲದ ಪತ್ರಕರ್ತ ರಾಜೇಶ್ ಪಾಂಡೆ ಅವರು ತಿಳಿಸಿದ್ದಾರೆ.
ಇನ್ನು ಕಾನೂನು ಪ್ರಕಾರ ಸರ್ಕಾರಿ ನೌಕರಿಯಲ್ಲಿರುವವರು ಮೊದಲ ಪತ್ನಿ ಬದುಕಿರುವಾಗಲೇ ಮತ್ತೊಂದು ಮದುವೆಯಾಗುವಂತಿಲ್ಲ. ಸೇವಾ ನಿಯಮಗಳ ಪ್ರಕಾರ ಏಕಕಾಲಕ್ಕೆ ಇಬ್ಬರು ಮಹಿಳೆಯರನ್ನು ಮದುವೆಯಾಗುವಂತಿಲ್ಲ. ಹೀಗಾಗಿ ಅವರಿಗೆ ಸಮಸ್ಯೆಯಾಗಲಿದೆ ಎಂದು ಸಿಆರ್ ಪಿಎಫ್ ವಕ್ತಾರ ಬಿಸಿ ಪಾತ್ರ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
SCROLL FOR NEXT