ದೇಶ

ಬಹುಮತ ಸಾಬೀತುಪಡಿಸಲು ಸಿದ್ಧ: ಬಿಜೆಪಿಗೆ ಮಧ್ಯ ಪ್ರದೇಶ ಸಿಎಂ ತಿರುಗೇಟು

Lingaraj Badiger
ಭೋಪಾಲ್: ನಮ್ಮ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧವಿದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಬಹುಮತ ಸಾಬೀತುಪಡಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಪ್ರತಿಪಕ್ಷ ಬಿಜೆಪಿ ರಾಜ್ಯಾಪಾಲೆ ಆನಂದಿಬೇನ್ ಪಟೇಲ್ ಅವರಿಗೆ ಪತ್ರ ಬರೆದಿತ್ತು.
ಬಿಜೆಪಿ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ನಾಥ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದಲೂ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವ ಯತ್ನ ನಡೆಸಿದೆ. ಕಳೆದ ಐದು ತಿಂಗಳಲ್ಲಿ ನಾನು ಕನಿಷ್ಠ ನಾಲ್ಕು ಬಾರಿ ಬಹುಮತ ಸಾಬೀತುಪಡಿಸಿದ್ದೇನೆ. ಆದರೂ ಅವರು ಸರ್ಕಾರ ಅಸ್ಥಿರಗೊಳಿಸಲು ಎಲ್ಲಾ ರೀತಿಯ ಯತ್ನಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಈಗಲೂ ಬಹುಮತ ಸಾಬೀತುಪಡಿಸಲು ಸಿದ್ಧವಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಯಲ್ಲಿ ಎನ್ ಡಿಎ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ ಬೆನ್ನಲ್ಲೇ ಬಿಎಸ್ ಪಿ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿರುವ ಕಮಲ್ ನಾಥ್ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿದೆ.
ಕಮಲ್ ನಾಥ್ ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದು, ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಾಪಾಲರಿಗೆ ನಾವು ಪತ್ರ ಬರೆಯುತ್ತಿದ್ದೇವೆ ಎಂದು ಮಧ್ಯ ಪ್ರದೇಶ ವಿಧಾನಸಭೆಯ ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು ಹೇಳಿದ್ದರು.
SCROLL FOR NEXT