ದೇಶ

ಸಂಪುಟದಿಂದ ರಾಜ್ ಭರ್ ಕೈಬಿಟ್ಟ ಸಿಎಂ ಯೋಗಿ ಆದಿತ್ಯಾನಾಥ್

Srinivasamurthy VN
ಲಖನೌ: ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಎದ್ದಿದ್ದು, ಮೈತ್ರಿ ಪಕ್ಷದ ಸಚಿವರನ್ನೇ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲರಾದ ರಾಮ್ ನಾಯಕ್ ಅವರಿಗೆ ಪತ್ರ ಬರೆದಿದ್ದು, ತಕ್ಷಣದಿಂದ ಜಾರಿ ಆಗುವಂತೆ ತಮ್ಮ ಸಚಿವ ಸಂಪುಟದಿಂದ ಓಂ ಪ್ರಕಾಶ್ ರಾಜ್ ಭರ್ ಅವರನ್ನು ಕೈ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಇತ್ತ ಯೋಗಿ ಆದಿತ್ಯನಾಥ್ ಅವರು ನೀಡಿರುವ ಪತ್ರಕ್ಕೆ ಗವರ್ನರ್ ರಾಮ್ ನಾಯಕ್ ಅವರು ಕೂಡ ಒಪ್ಪಿಗೆ ನೀಡಿದ್ದು, ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ. ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ರಾಜ್ ಭರ್ ಅವರು ಅವರು ಆದಿತ್ಯನಾಥ್ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. 
ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೇ ರಾಜ್ ಭರ್ ರೆಬೆಲ್ ಆಗಿದ್ದರು. ಮೇ 19 ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಜ್ ಭರ್ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಲಭಿಸಲಿದೆ. ಎಸ್‍ಪಿ ಹಾಗೂ ಬಿಎಸ್‍ಪಿ ಮೈತ್ರಿಕೂಟ ಹೆಚ್ಚಿನ ಸ್ಥಾನಗಳಿಸಲಿದೆ. ಬಿಜೆಪಿ ವಿರುದ್ಧ ತಾವು ರೆಬೆಲ್ ಆಗಿರುವುದರಿಂದಾಗಿಯೇ ಈ ಫಲಿತಾಂಶ ಬರಲಿದೆ ಎಂದು ಹೇಳಿದ್ದರು. 
ಅಂತೆಯೇ ಕೊನೆಯ ಹಂತದ ಮತದಾನದ ವೇಳೆ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದ ರಾಜ್ ಭರ್, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಇದು ಬಿಜೆಪಿ ಮುಜುಗರಕ್ಕೆ ಕಾರಣವಾಗಿತ್ತು.
SCROLL FOR NEXT