ದೇಶ

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಎಸ್ಪಿ ಹಿರಿಯ ನಾಯಕ ರಾಮ್‌ವೀರ್‌ ಉಪಾಧ್ಯಾಯ ಅಮಾನತು

Raghavendra Adiga
ಲಖನೌ: ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಮಂಗಳವಾರ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮ್‌ವೀರ್ ಉಪಾಧ್ಯಾಯ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಪಕ್ಷದಿಂದ ಅಮಾನತು ಮಾಡಿದೆ.
ಪಕ್ಷದಲ್ಲಿ ಬ್ರಾಹ್ಮಣ ಮುಖವಾಗಿದ್ದ ಉಪಾಧ್ಯಾಯ ಅವರನ್ನು ರಾಜ್ಯ ವಿಧಾನಸಭೆಯ ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೆವಾ ಲಾಲ್‌ ಗೌತಮ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ನೀವು ಬಿಎಸ್‌ಪಿ ಅಭ್ಯರ್ಥಿಯ ವಿರುದ್ಧವಾಗಿ ಕೆಲಸ ಮಾಡಿದ್ದೀರಿ ಮತ್ತು ಆಗ್ರಾ, ಫತೇಪುರ್ ಸಿಕ್ರಿ, ಅಲಿಘಡ ಮತ್ತಿತರ ಕ್ಷೇತ್ರಗಳಲ್ಲಿ ವಿರೋಧಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದೀರಿ ಎಂದು ಉಪಾಧ್ಯಾಯ ಅವರಿಗೆ ಬರೆದ ಪತ್ರದಲ್ಲಿ ಗೌತಮ್ ಹೇಳಿದ್ದಾರೆ.
ನಿಮ್ಮನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಮತ್ತು ವಿಧಾನಸಭೆಯ ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಲಾಗಿದೆ.  ಪಕ್ಷದ ಯಾವುದೇ ಸಭೆಗೆ ಆಹ್ವಾನ ನೀಡುವುದಿಲ್ಲ ಅಥವಾ ನೀವು ಪಕ್ಷದ ಯಾವುದೇ ಸಭೆಗೆ ಹಾಜರಾಗುವಂತಿಲ್ಲ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಉಪಾಧ್ಯಾಯ ಅವರನ್ನು ಅಮಾನತು ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಉಪಾಧ್ಯಾಯ ಅವರು ಬಹಿರಂಗವಾಗಿ ಅಲಿಘಡ ಮತ್ತು ಇತರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರೆ ನೀಡಿದ್ದರು.
ಉಪಾಧ್ಯಾಯ ಅವರ ಕಿರಿಯ ಸಹೋದರ ಮುಕುಲ್ ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಉಪಾಧ್ಯಾಯ ಕೂಡ ತಮ್ಮ ಪತ್ನಿಯೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಬ್ಬಿದೆ.
SCROLL FOR NEXT