ದೇಶ

ಲೋಕಸಭೆ ಚುನಾವಣೆಯಲ್ಲಿ ಆರ್ ಜೆಡಿ ಶೂನ್ಯ ಸಾಧನೆ: ಜೈಲಿನಲ್ಲಿ ಊಟ, ನಿದ್ದೆ ಬಿಟ್ಟ ಲಾಲು

Lingaraj Badiger
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಆರ್ ಜೆಡಿ ಬಿಹಾರದಲ್ಲಿ ಶೂನ್ಯ ಸಾಧನೆ ಮಾಡಿದ್ದರಿಂದ ತೀವ್ರ ಬೇಸರಗೊಂಡಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಜೈಲಿನಲ್ಲಿ ಊಟ, ನಿದ್ದೆ ಬಿಟ್ಟು ಮೌನಕ್ಕೆ ಶರಣಾಗಿದ್ದಾರೆ.
ರಾಂಚಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲು ಸದ್ಯ, ಅಲ್ಲಿಯ ಹತ್ತಿರದ ಆಸ್ಪತ್ರೆಯಲ್ಲಿ 
ಚಿಕಿತ್ಸೆ ಪಡೆಯುತ್ತಿದ್ದಾರೆ. 
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಲಾಲು ಪ್ರಸಾದ್ ಯಾದವ್ ಅವರ ದಿನಚರಿಯಲ್ಲಿ ಬದಲಾವಣೆಯಾಗಿದೆ. ಕಳೆದ ಎರಡು ದಿನಗಳಿಂದ ಬೆಳಗಿನ ತಿಂಡಿ ಮತ್ತು ರಾತ್ರಿ ಊಟ ಮಾತ್ರ ಮಾಡುತ್ತಿದ್ದಾರೆ. ಮಧ್ಯಾಹ್ನದ ಊಟ ಬಿಟ್ಟಿದ್ದಾರೆ. ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಮತ್ತು ಸದಾ ಮೌನವಾಗಿರುತ್ತಾರೆ ಎಂದು ಆಸ್ಪತ್ರೆಯ ವೈದ್ಯ ಉಮೇಶ್ ಪ್ರದಾಸ್ ಅವರು ತಿಳಿಸಿದ್ದಾರೆ.
ಮುಂಜಾನೆಯ ಉಪಾಹಾರವನ್ನು ಸಹ ಕಷ್ಟಪಟ್ಟು ತಿನ್ನುತ್ತಿದ್ದಾರೆ. ಮಧ್ಯಾಹ್ನದ ಊಟವನ್ನು ಸರಿಯಾಗಿ ಸೇವಿಸುತ್ತಿಲ್ಲ. ಬೆಳಗ್ಗೆ ತಿಂದವರು ಮತ್ತೆ ತಿನ್ನುವುದು ರಾತ್ರಿಯೂಟವೇ. ಹೀಗಾಗಿ ಅವರಿಗೆ ಇನ್ಸುಲಿನ್ ನೀಡಲು ಸಮಸ್ಯೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. 
ಮೂಲಗಳ ಪ್ರಕಾರ, ಪಕ್ಷ ಹೀನಾಯ ಸೋಲು ಕಂಡ ಬಳಿಕ ಲಾಲು ಬಹಳ ನಿರಾಶರಾಗಿದ್ದಾರೆ. ಅವರು ಸರಿಯಾಗಿ ನಿದ್ರಿಸುತ್ತಿಲ್ಲ. ಊಟ ಮಾಡುತ್ತಿಲ್ಲ. ಮಧ್ಯಾಹ್ನದ ಊಟವನ್ನು ತ್ಯಜಿಸಿರುವ ಅವರು ರಾತ್ರಿ ಸ್ವಲ್ಪ ಆಹಾರ ಸೇವಿಸುತ್ತಾರೆ, ಅದು ಕೂಡ ಒತ್ತಾಯಪೂರ್ವಕವಾಗಿ ಎಂದು ಹೇಳಲಾಗುತ್ತಿದೆ.
ಮೇವು ಹಗರಣದಲ್ಲಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರು ಆತಂಕದಿಂದ( Anxiety)ದಿಂದ ಬಳಲುತ್ತಿರಬಹುದೆಂದು ವೈದ್ಯರು ಶಂಕಿಸಿದ್ದಾರೆ.
SCROLL FOR NEXT