ದೇಶ

2017ರಲ್ಲಿ ಗೋಮಾಂಸದ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಜಾರ್ಖಂಡ್ ಆದಿವಾಸಿ ಪ್ರೊಫೆಸರ್ ಬಂಧನ

Lingaraj Badiger
ಜಮ್ ಶೆಡ್ ಪುರ: 2017ರಲ್ಲಿ ಚೆನ್ನೈನಲ್ಲಿ ನಡೆದ ಗೋಮಾಂಸದ ಪಾರ್ಟಿಯನ್ನು ಸಮರ್ಥಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಜಾರ್ಖಂಡ್ ಆದಿವಾಸಿ ಪೊಫೆಸರ್ ಒಬ್ಬರನ್ನು ಶನಿವಾರ ತಡರಾತ್ರಿ ಬಂಧಿಸಲಾಗಿದೆ.
ತಲೆ ಮರೆಸಿಕೊಂಡಿದ್ದ ಜಮ್ ಶೆಡ್ ಪುರದ ಸಹಕಾರಿ ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಜೀತ್ ರಾಯ್ ಹನ್ಸಡ ಅವರನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹನ್ಸಡ ಅವರ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಲಾಗಿದೆ ಎಂದು ಸಾಕ್ಚಿ ಪೊಲೀಸ್ ಠಾಣೆಯ ಅಧಿಕಾರಿ ರಾಜೀವ್ ಸಿಂಗ್ ಅವರು ಹೇಳಿದ್ದಾರೆ.
2017ರಲ್ಲಿ ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಆಯೋಜಿಸಿದ್ದ ಬೀಫ್ ಪಾರ್ಟಿ ಬೆಂಬಲಿಸಿ ಹನ್ಸಡ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಅವರ ವಿರುದ್ಧ ಆರ್ ಎಸ್ಎಸ್ ಕಾರ್ಯಕರ್ತರೊಬ್ಬರು ಕೇಸ್ ದಾಖಲಿಸಿದ್ದರು.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಾಗೂ ದ್ವೇಷ ಭಾವನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹನ್ಸಡ ವಿರುದ್ಧ ಎಫ್ಆರ್ ದಾಖಲಿಸಲಾಗಿದೆ ಎಂದು ರಾಜೀವ್ ಸಿಂಗ್ ತಿಳಿಸಿದ್ದಾರೆ.
ಇನ್ನು ಹನ್ಸಡ ಬಂಧನ ಬಗ್ಗೆ ಪ್ರತಿಕ್ರಿಯಿಸಿರುವ ಕೊಲ್ಹಾನ್ ವಿಶ್ವವಿದ್ಯಾಲಯದ ಕುಲಪತಿ ಶುಕ್ಲಾ ಮೋಹಂತಿ ಅವರು, ಹನ್ಸಡ ಅವರು ಒಬ್ಬ ಅತಿಥಿ ಉಪನ್ಯಾಸಕರಾಗಿದ್ದು, ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ನಂತರ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಬಳಿಕ ಅವರು ಕ್ಷಮೆಯಾಚಿಸಿದ್ದರು ಎಂದು ಹೇಳಿದ್ದಾರೆ.
SCROLL FOR NEXT