ದೇಶ

ಚುನಾವಣೆಯಲ್ಲಿ ಸೋಲು: ರಾಜಸ್ಥಾನ ಕಾಂಗ್ರೆಸ್ ನಲ್ಲಿ ತೀವ್ರ ಬಿಕ್ಕಟ್ಟು, ನಾಯಕತ್ವ ಬದಲಾವಣೆಯ ಮಾತು

Lingaraj Badiger
ಜೈಪುರ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಆಡಳಿತರೂಢ ಕಾಂಗ್ರೆಸ್ ನಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿಯಾಗಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಮಾಡುವ ಬದಲು ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸುಶಿಲ್ ಅಸೋಪಾ ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜೈಪುರ ಮಾಜಿ ಮೇಯರ್ ಜ್ಯೋತಿ ಖಂಡವಾಲ್ ಅವರು, ಬೂತ್ ಮಟ್ಟದ ಕಾರ್ಯಕರ್ತರನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದೆ ತನ್ನ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಸೋಲಿನ ಕುರಿತು ಚರ್ಚಿಸಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರ ಗೆಲ್ಲುವಲ್ಲಿ ವಿಫಲವಾಗಿದೆ.
ರಾಜಸ್ಥಾನದಲ್ಲಿ ಎಲ್ಲೇ ಹೋದರು ಕಾಂಗ್ರೆಸ್ ಧ್ವನಿ ಕೇಳಿಸುತ್ತದೆ. ಆದರೂ ಲೋಕಸಭೆ ಚುನಾವಣೆ ಫಲಿತಾಂಶ ಭಿನ್ನವಾಗಿದೆ. ಸಚಿನ್ ಪೈಲಟ್ ಅವರ ಕಠಿಣ ಶ್ರಮಕ್ಕಾಗಿ ಅವರನ್ನು ಸಿಎಂ ಮಾಡಬೇಕಿತ್ತು ಎಂದು ಸುಶಿಲ್ ಅಸೋಪಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಫೇಸ್ ಬುಕ್ ಪೋಸ್ಟ್ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಸೋಪಾ ಅವರು, ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೆ ಎಂದಿದ್ದಾರೆ.
SCROLL FOR NEXT