ದೇಶ

ಪಶ್ಚಿಮ ಬಂಗಾಳದಲ್ಲಿ ದೀದಿಗೆ ಭಾರಿ ಶಾಕ್: ಇಬ್ಬರು ಶಾಸಕರು, 50 ಮಂದಿ ಟಿಎಂಸಿ ಕೌನ್ಸಿಲರ್ ಗಳು ಬಿಜೆಪಿ ಸೇರ್ಪಡೆ

Srinivasamurthy VN
ಕೋಲ್ಕತಾ: ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆ ಭರ್ಜರಿ ಫಲಿತಾಂಶ ನೀಡಿದ್ದು, ಟಿಎಂಸಿ ಇಬ್ಬರು ಶಾಸಕರು, 50 ಮಂದಿ ಟಿಎಂಸಿ ಕೌನ್ಸಿಲರ್ ಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮುಕಲ್ ರಾಯ್ ಪುತ್ರ ಮತ್ತು ಟಿಎಂಸಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಸುಬ್ರಂಗ್ಶು ರಾಯ್ ಸೇರಿದಂತೆ ಇಬ್ಬರು ಶಾಸಕರು ಮತ್ತು 50 ಮಂದಿ ಟಿಎಂಸಿ ಕೌನ್ಸಿಲರ್ ಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಸಿಪಿಎಂ ಪಕ್ಷದ ಓರ್ವ ಶಾಸಕ ಕೂಡ ಕೇಸರ ಪಡೆಗೆ ಸೇರ್ಪಡೆಯಾಗಿದ್ದಾರೆ. ನಿನ್ನೆಯಷ್ಟೇ ಕಂಚ್ರಾಪಾರಾ ಮುನ್ಸಿಪಾಲಿಟಿಯ ಸುಮಾರು 16 ಕೌನ್ಸಿಲರ್ ಗಳು ಎಐಟಿಸಿ ಕೌನ್ಸಿಲರ್ ಪಾರ್ಟಿಗೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂಪಡೆಯುವ ಮೂಲಕ ತೃಣಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು. ಅಂತೆಯೇ ಸುಬ್ರತೋ ರಾಯ್ ಅವರೂ ಕೂಡ ತಮ್ಮ ಸದಸ್ಯತ್ವವನ್ನು ಹಿಂದಕ್ಕೆ ಪಡೆದಿದ್ದರು. ಇದಕ್ಕೂ ಮೊದಲೇ ಅವರನ್ನು ಅಂದರೆ ಕಳೆದ ಮೇ 25ರಂದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಟಿಎಂಸಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನಾಯಕರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜಾಪುರ್ ವಿಧಾನಸಭಾ ಕ್ಷೇತ್ರದ ಶಾಸಕರು ಟಿಎಂಸಿಯಲ್ಲಿ ಉಸಿರುಗಟ್ಟುವ ವಾತವಾರಣವಿತ್ತು, ಹೀಗಾಗಿ ನಾನು ಬಿಜೆಪಿಗೆ ಬಂದೆ, ಈಗ ಕೊಂಚ ನಿರಾಳವಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮಂತೆಯೇ ಟಿಎಂಸಿಯ ಹಲವು ನಾಯಕರು ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
7 ಹಂತದ ಚುನಾವಣೆಯಂತೆಯೇ 7 ಹಂತದಲ್ಲಿ ಆಪರೇಷನ್ ಕಮಲ: ಕೈಲಾಶ್ ವಿಜಯವರ್ಗೀಯ
ಇನ್ನು ಕಳೆದ ಲೋಕಸಭಾ ಚುನಾವಣೆ 7 ಹಂತದಲ್ಲಿ ನಡೆದಂತೆಯೇ ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಕಮಲ ಕೂಡ 7 ಹಂತದಲ್ಲಿ ನಡೆಯುತ್ತದೆ. ಇದು ಮೊದಲ ಹಂತವಷ್ಟೇ.. ಮುಂದಿನ ಹಂತದಲ್ಲಿ ಪ್ರಭಾವಿ ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
SCROLL FOR NEXT