ದೇಶ

ಕಾಶ್ಮೀರ: ಕುಲ್ಗಾಮ್ ನಲ್ಲಿ ಉಗ್ರರು, ಸೇನೆ ನಡುವೆ ಗುಂಡಿನ ಚಕಮಕಿ, ಓರ್ವ ಉಗ್ರ ಹತ

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತು ಸೇನಾಪಡೆಗಳ ನಡುವೆ ಇಂದು ಮುಂಜಾನೆಯಿಂದ ಗುಂಡಿನ ಚಕಮಕಿ ನಡೆಯುತ್ತಿದ್ದು, ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಕುಲ್ಗಾಮ್ ಜಿಲ್ಲೆಯ ಮೊಹಮದ್ ಪೋರಾ ಪ್ರಾಂತ್ಯದ ಟಾಜಿಪೋರಾ ಗ್ರಾಮದಲ್ಲಿ ಈ ಎನ್ಕೌಂಟರ್ ನಡೆಯುತ್ತಿದ್ದು, ಸ್ಥಳದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಉಗ್ರರು ಇದ್ದಾರೆ. ಈ ಪೈಕಿ ಓರ್ವ ಉಗ್ರರನ್ನು ಪ್ರಸ್ತುತ ಹೊಡೆದುರುಳಿಸಲಾಗಿದ್ದು, ಮತ್ತೋರ್ವ ಉಗ್ರನಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆಯಷ್ಟೇ ಅನಂತನಾಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೇನೆ ಎನ್ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಸೆದೆಬಡಿದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿತ್ತು.  ಅನಂತ್ ನಾಗ್ ನ ಕಚ್ವಾನ್ ಅರಣ್ಯದಲ್ಲಿ  ಉಗ್ರರು ಅಡಗಿದ್ದಾರೆಂಬ ನಿರ್ದಿಷ್ಟ ಮಾಹಿತಿ ಆಧರಿಸಿ, ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ)  ರಾಜ್ಯ ಪೊಲೀಸ್ ಮತ್ತು  ಸಿಆರ್ ಪಿಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.  ಭದ್ರತಾ ಪಡೆಗಳು ಒಂದು ನಿರ್ದಿಷ್ಟ ಪ್ರದೇಶದ ಕಡೆಗೆ ಸಾಗುತ್ತಿದ್ದಾಗ ಅಡಗಿ ಕುಳಿತಿದ್ದ ಉಗ್ರರು  ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಗುಂಡಿನ ಚಕಮಕಿಯಾಗಿ ಇಬ್ಬರು ಉಗ್ರರು ಹತರಾಗಿದ್ದರು.
ಇನ್ನು ಕಾಶ್ಮೀರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಅನಂತನಾಗ್ ಜಿಲ್ಲೆ ಕೂಡ ಒಂದಾಗಿದ್ದು, ಮೇ ತಿಂಗಳಲ್ಲೇ ಭದ್ರತಾ ಪಡೆಗಳು 8 ಮಂದಿ ಉಗ್ರರನ್ನು ಹತ್ಯೆಗೈದಿವೆ. ಅಂತೆಯೇ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಜೀವಂತ ಸೆರೆ ಹಿಡಿಯಲಾಗಿದೆ. ಇತ್ತೀಚೆಗಷ್ಟೇ ತ್ರಾಲ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಝಾಕಿರ್ ಮುಸಾನನ್ನು ಕೊಲ್ಲಲಾಗಿತ್ತು. 
SCROLL FOR NEXT