ದೇಶ

ಪ.ಬಂಗಾಳದಲ್ಲಿ 54 ರಾಜಕೀಯ ಪ್ರೇರಿತ ಕೊಲೆ ಆರೋಪ 'ಸುಳ್ಳು': ಮೋದಿ ಪ್ರಮಾಣ ವಚನಕ್ಕೆ ಮಮತಾ ಗೈರು!

Vishwanath S

ಕೋಲ್ಕತ್ತ: ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ರಾಜಕೀಯ ಕೊಲೆಗಳ ಸುಳ್ಳು ವರದಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯಲ್ಲಿ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗದಿರುವುದಕ್ಕೆ ಕ್ಷಮೆ ಇರಲಿ ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

'ರಾಜ್ಯದಲ್ಲಿ ರಾಜಕೀಯ ಹಿಂಸಾಚಾರಗಳಲ್ಲಿ ಪಕ್ಷದ 54 ಕಾರ್ಯಕರ್ತರು ಕೊಲೆಯಾಗಿದ್ದಾರೆ ಎಂಬ ಬಿಜೆಪಿ ಹೇಳಿಕೆ ಸುಳ್ಳಿನಿಂದ ಕೂಡಿದ್ದು, ಈ ಸಾವುಗಳು ವೈಯಕ್ತಿಕ ಶತ್ರುತ್ವ, ಕುಟುಂಬ ಜಗಳ ಮತ್ತು ಇತರ ವಿವಾದಗಳಿಂದ ನಡೆದಿವೆ.' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಜಕೀಯ ಹಿಂಸಾಚಾರಗಳಿಂದ ಬಿಜೆಪಿ ಕಾರ್ಯಕರ್ತರು ಸತ್ತಿರುವ ಕುರಿತು ತಮ್ಮ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿದಿದ್ದೇನೆ ಎಂದು ಹೇಳಿದ್ದಾರೆ.

'ನೂತನ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಅಭಿನಂದನೆಗಳು.'ಸಾಂವಿಧಾನಿಕ ಆಮಂತ್ರಣವನ್ನು ಸ್ವೀಕರಿಸಿ, ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗುವುದು ನನ್ನ ಕಾರ್ಯಕ್ರಮವಾಗಿತ್ತು. ಆದರೆ, ಕಳೆದ ಒಂದು ತಾಸಿನಲ್ಲಿ ಬಂಗಾಳದಲ್ಲಿ ಪಕ್ಷದ 54 ಕಾರ್ಯಕರ್ತರು ರಾಜಕೀಯ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ನೋಡುತ್ತಿದ್ದೇನೆ. ಇದು ಸಂಪೂರ್ಣವಾಗಿ ಸುಳ್ಳು. ಬಂಗಾಳದಲ್ಲಿ ಯಾವುದೇ ರಾಜಕೀಯ ಕೊಲೆಗಳು ನಡೆದಿಲ್ಲ. ವೈಯುಕ್ತಿಕ ದ್ವೇಷ, ಕುಟುಂಬ ಜಗಳಗಳು ಮತ್ತು ಇತರ ವಿವಾದಗಳಿಂದಾಗಿ ಈ ಸಾವುಗಳು ಸಂಭವಿಸಿರಬಹುದು. ಇವು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಸರ್ಕಾರದಲ್ಲಿ ಅಂತಹ ದಾಖಲೆಗಳೂ ಇಲ್ಲ' ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.  

'ಹಾಗಾಗಿ ಕ್ಷಮಿಸಿ, ನರೇಂದ್ರ ಮೋದಿ ಜೀ. ಸಮಾರಂಭಕ್ಕೆ ಹಾಜರಾಗದಿರುವುದಕ್ಕೆ ಇದೇ ವಿಷಯ ತಡೆದಿದೆ' ಎಂದು ಮಮತಾ ಹೇಳಿದ್ದಾರೆ. 'ಪ್ರಮಾಣ ವಚನ ಸ್ವೀಕಾರ ಸಮಾರಂಭವು ಪ್ರಜಾಪ್ರಭುತ್ವ ಆಚರಿಸಲು ಒಂದು ಉತ್ಸವದ ಸಂದರ್ಭವಾಗಿದೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದರ ಮೂಲಕ ಯಾವುದೇ ರಾಜಕೀಯ ಪಕ್ಷ ಅಪಮೌಲ್ಯಗೊಳಿಸಬಾರದು. ದಯವಿಟ್ಟು ತಮ್ಮನ್ನು ಕ್ಷಮಿಸಿ' ಎಂದು ಮಮತಾ ಹೇಳಿದ್ದಾರೆ.

'ಸಾಂವಿಧಾನಿಕ ಸೌಜನ್ಯ' ದಿಂದ ತಾವು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿರುತ್ತಿರುವುದಾಗಿ ಮಂಗಳವಾರ ಮಮತಾ ಬ್ಯಾನರ್ಜಿ ಹೇಳಿದ್ದರು.

SCROLL FOR NEXT